ಜನಪ್ರಿಯತೆ ಕುಸಿದರೂ ಅಗ್ರಸ್ಥಾನ ಕಳೆದುಕೊಳ್ಳದ ಪ್ರಧಾನಿ ಮೋದಿ; ಹೆಚ್ಚಿದ ರಾಹುಲ್ ಜನಪ್ರಿಯತೆ: NDTV ಸಮೀಕ್ಷೆ

Update: 2023-05-24 13:38 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅತ್ಯುನ್ನತ ಹುದ್ದೆಗೆ ಸೂಕ್ತ ಜನಪ್ರಿಯ ನಾಯಕರಾಗಿ ಮುಂದುವರಿದಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿಯವರ ಜನಪ್ರಿಯತೆ ಹೆಚ್ಚುತ್ತಿರುವುದು ಲೋಕನೀತಿ ಸೆಂಟರ್ ಫಾರ್ ದ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್) ಸಹಯೋಗದಲ್ಲಿ ಎನ್‌ಡಿಟಿವಿ ನಡೆಸಿದ ವಿಶೇಷ ಸಮೀಕ್ಷೆಯಿಂದ ದೃಢಪಟ್ಟಿದೆ.

2019 ರಿಂದ 2023ರ ಅವಧಿಯಲ್ಲಿ ಮೋದಿಯವರ ಜನಪ್ರಿಯತೆ ಶೇಕಡ 44 ರಿಂದ 43ಕ್ಕೆ ಇಳಿದಿದ್ದರೆ, ರಾಹುಲ್‌ಗಾಂಧಿಯವರ ಜನಪ್ರಿಯತೆ ಶೇಕಡ 24 ರಿಂದ 27ಕ್ಕೇರಿದೆ.

ಪ್ರಧಾನಿ ಮೋದಿ ಒಂಬತ್ತು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಮತ್ತು ಮುಂದಿನ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಈ ಸಮೀಕ್ಷೆ ನಡೆಸಲಾಗಿತ್ತು. ಕಾಂಗ್ರೆಸ್ ವಿರುದ್ಧ ಬಿಜೆಪಿ ಪರಾಭವಗೊಂಡ ಕರ್ನಾಟಕ ವಿಧಾನಸಭಾ ಚುನಾವಣೆ ಬಳಿಕ ಮೇ 10 ರಿಂದ 19ರ ನಡುವೆ 19 ರಾಜ್ಯಗಳಲ್ಲಿ ಸಮೀಕ್ಷೆ ನಡೆದಿತ್ತು.

ಕರ್ನಾಟಕದ ಸೋಲಿನ ಹೊರತಾಗಿಯೂ ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರದ ಸೂತ್ರ ಹಿಡಿಯಬೇಕು ಎನ್ನುವುದು ಶೇಕಡ 43ರಷ್ಟು ಮಂದಿಯ ಬಯಕೆ. ಇದನ್ನು ಶೇಕಡ 38ರಷ್ಟು ಮಂದಿ ಒಪ್ಪುವುದಿಲ್ಲ. ಇಂದೇ ಮತದಾನ ನಡೆದರೆ ಬಿಜೆಪಿಯನ್ನು ಬೆಂಬಲಿಸುವುದಾಗಿ ಶೇಕಡ 40ರಷ್ಟು ಮಂದಿ ಹೇಳಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಶೇಕಡ 29ರಷ್ಟು ಮಂದಿ ಒಲವು ತೋರಿದ್ದಾರೆ.

ಬಿಜೆಪಿಯ ಮತಪ್ರಮಾಣ 2019ರಲ್ಲಿ ಶೇಕಡ 37 ಇದ್ದುದು ಶೇಕಡ 39ಕ್ಕೆ ಏರಿದ್ದರೆ, ಕಾಂಗ್ರೆಸ್‌ನ ಜನಪ್ರಿಯತೆ ಈ ಅವಧಿಯಲ್ಲಿ ಶೇಕಡ 19 ರಿಂದ 29ಕ್ಕೇರಿದೆ. ಮೋದಿಯವರನ್ನು ದೇಶದ ಅತ್ಯುನ್ನತ ಹುದ್ದೆಗೆ ಸೂಕ್ತ ವ್ಯಕ್ತಿ ಎಂದು ಶೇಕಡ 43ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದರೆ, ಅವರ ಎದುರಾಳಿ ರಾಹುಲ್‌ ಗಾಂಧಿ 27ರಷ್ಟು ಜನರ ಒಲವು ಸಂಪಾದಿಸಿದ್ದಾರೆ.

ಉಳಿದಂತೆ ಮಮತಾ ಬ್ಯಾನರ್ಜಿ ಹಾಗೂ ಅರವಿಂದ್ ಕೇಜ್ರಿವಾಲ್ ಶೇಕಡ 4ರಷ್ಟು ಜನರ ಬೆಂಬಲ ಪಡೆದಿದ್ದರೆ, ಅಖಿಲೇಶ್ ಯಾದವ್ ಹಾಗೂ ನಿತೀಶ್ ಕುಮಾರ್ ಪರ ಕ್ರಮವಾಗಿ ಶೇಕಡಾ 3 ಮತ್ತು ಶೇಕಡ 1ರಷ್ಟು ಮಂದಿ ಒಲವು ವ್ಯಕ್ತಪಡಿಸಿದ್ದಾರೆ. ಶೇಕಡ 18ರಷ್ಟು ಮಂದಿ ಇತರರ ಬಗ್ಗೆ ಒಲವು ಹೊಂದಿದ್ದಾರೆ.

Similar News