ಶಾಸಕ ಹರೀಶ್ ಪೂಂಜಾ ವಿರುದ್ಧ ಮಾನನಷ್ಟ ಮೊಕದ್ದಮೆ: ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್

ಸಿಎಂ ಸಿದ್ದರಾಮಯ್ಯ ವಿರುದ್ಧ ಕೊಲೆ ಆರೋಪ

Update: 2023-05-25 15:55 GMT

ಮಂಗಳೂರು, ಮೇ 25: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ 24 ಮಂದಿ ಹಿಂದುತ್ವವಾದಿಗಳನ್ನು ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ 24 ಮಂದಿಯ ಕೊಲೆ ನಡೆಸಿದ್ದರೆ ಕಳೆದ ಮೂರುವರೆ ವರ್ಷ ಆಡಳಿತ ನಡೆಸಿದ್ದ ಬಿಜೆಪಿ ತನಿಖೆ ನಡೆಸದೆ ಮೌನವಾಗಿದ್ದುದು  ಯಾತಕ್ಕೆ? ಶೇ.40ರಷ್ಟು ಕಮಿಷನ್ ಹಣವನ್ನು ಎಣಿಸುವುದರಲ್ಲೇ ತಲ್ಲೀನರಾದರೇ? ಎಂದು ಪ್ರಶ್ನಿಸಿದರು.

ಬೆಳ್ತಂಗಡಿಯಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವದಲ್ಲಿ ಮಾತನಾಡಿದ್ದ ಶಾಸಕ ಹರೀಶ್ ಪೂಂಜಾ, ಸಿದ್ದರಾಮಯ್ಯ ವಿರುದ್ಧ ಮಾಡಿದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಮಂಗಳೂರಿನಲ್ಲೂ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೇಸು ದಾಖಲಿಸಲಿದ್ದಾರೆ. ಈ ವಿಚಾರವನ್ನು ಇಲ್ಲಿಗೆ ಬಿಡುವುದಿಲ್ಲ, ಈ ಬಗ್ಗೆ ಡಿಸಿಸಿ ಕಾನೂನು ಘಟಕದ ಅಧ್ಯಕ್ಷರ ಜೊತೆ ಮಾತುಕತೆ ನಡೆಸಲಾಗಿದೆ. ಹರೀಶ್ ಪೂಂಜಾ ಕ್ಷಮೆಯಾಚಿಸದಿದ್ದರೆ ಕಾಂಗ್ರೆಸ್‌ನಿಂದ ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇವೆ ಎಂದು ಹರೀಶ್ ಕುಮಾರ್ ತಿಳಿಸಿದರು.

ಹರೀಶ್ ಪೂಂಜಾ ಹಣದ ಹೊಳೆ ಹರಿಸಿ ಅಕ್ರಮವಾಗಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರ ಜೊತೆ ಪೊಲೀಸರೂ ಶಾಮೀಲಾಗಿದ್ದಾರೆ. ಬೆಳ್ತಂಗಡಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಮತ್ತು ಸದಸ್ಯರೊಬ್ಬರು ಹಣ ಹಂಚುತ್ತಿದ್ದಾಗ ಸಿಕ್ಕಿಬಿದ್ದರೂ ಪೊಲೀಸರು ಕ್ರಮ ಜರಗಿಸಿಲ್ಲ. ಚುನಾವಣೆಯ ಸಂದರ್ಭ ಸಾವಿರ ಕೋಟಿ ರೂಪಾಯಿಯ ಗುದ್ದಲಿಪೂಜೆ ಮಾಡಿದ್ದಾರೆ. ಅದರ ಪ್ರಚಾರಕ್ಕಾಗಿ ಐದು ಸಾವಿರಕ್ಕೂ ಅಧಿಕ ಫ್ಲೆಕ್ಸ್ ಹಾಕಿಸಿದ್ದಾರೆ. ಈ ಕಾಮಗಾರಿಗಳಿಗೆ ಸರಕಾರದ ಅನುಮೋದನೆ ಪಡೆದಿಲ್ಲ. ಅಂದಾಜು ವೆಚ್ಚವೂ ಆಗಿಲ್ಲ. ಅನುಮೋದನೆ ಇಲ್ಲದೆ ಆದ ಕೆಲಸಕ್ಕೆ ರಾಜ್ಯ ಸರಕಾರ ಅನುದಾನ ನೀಡುವುದಿಲ್ಲ ಎಂದು ಹರೀಶ್ ಕುಮಾರ್ ಎಚ್ಚರಿಸಿದರು.

ದ.ಕ.ಜಿಲ್ಲೆಯಲ್ಲಿ ಡ್ರಗ್ಸ್, ಮಟ್ಕಾ ಚೀಟಿ, ಮರಳು ಮಾಫಿಯಾ ಮಿತಿಮೀರಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಪೊಲೀಸ್ ಠಾಣೆಗೆ ಮಾಮೂಲಿ ಹೋಗುವುದರಿಂದ ಅವರಿಗೆ ಮಾಫಿಯಾ ಕಿಂಗ್‌ಪಿನ್ ಬಗ್ಗೆಯೂ ಗೊತ್ತಿದೆ. ಹಾಗಾಗಿ ಈ ಮಾಫಿಯಾಗಳ ಕಿಂಗ್‌ಪಿನ್‌ಗಳನ್ನು ಪತ್ತೆ ಹಚ್ಚಬೇಕು. ಮಾಫಿಯಾಗಳಿಂದ ಪೊಲೀಸ್ ಠಾಣೆ, ಯಾವ ಪಕ್ಷಗಳಿಗೆ ಎಷ್ಟು ಹಣ ಹೋಗಿದೆ ಎನ್ನುವ ಬಗ್ಗೆಯೂ ಶೀಘ್ರ ತನಿಖೆಯಾಗಬೇಕು ಎಂದು ಹರೀಶ್ ಕುಮಾರ್ ಒತ್ತಾಯಿಸಿದರು.

ನಾವು ಯಾವತ್ತೂ ಹಿಂದುತ್ವ ವಿರೋಧಿಗಳಲ್ಲ, ಎಲ್ಲಾ ಜಾತಿ, ಧರ್ಮೀಯರನ್ನೂ ಸಮಾನವಾಗಿ ಕಾಣುತ್ತೇವೆ. ನಕಲಿ ಹಿಂದುತ್ವವಾದಿಗಳ ಬುಡ ಕರಾವಳಿಯಲ್ಲೇ ಅಲ್ಲಾಡುತ್ತಿದೆ. ಪುತ್ತೂರಿನಲ್ಲಿ ಹಿಂದುತ್ವವಾದಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಯಾರು ಎಂಬುದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರುತ್ತಲೇ ಆಯುಧ ಪೂಜೆ ಮಾಡಲು ಸರಕಾರ ಅಡ್ಡಿಪಡಿಸುತ್ತಿದೆ ಎಂದೆಲ್ಲಾ ಅಪಪ್ರಚಾರ ಮಾಡಲಾಗುತ್ತದೆ. ಅವರವರ ಆಚರಣೆ ಮಾಡಲು ಸರಕಾರ ಅಡ್ಡಿಪಡಿಸುವುದಿಲ್ಲ ಎಂದು ಹರೀಶ್ ಕುಮಾರ್ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಮನುರಾಜ್, ಶಾಲೆಟ್ ಪಿಂಟೋ, ಟಿ.ಕೆ. ಸುಧೀರ್, ಸಿಎಂ ಮುಸ್ತಫಾ, ಸಂತೋಷ್ ಕುಮಾರ್ ಶೆಟ್ಟಿ, ಜಯಶೀಲಾ ಅಡ್ಯಂತಾಯ, ಚಂದ್ರಕಲಾ, ಗಣೇಶ್ ಪೂಜಾರಿ, ಶಾಂತಳಾ ಗಟ್ಟಿ ಉಪಸ್ಥಿತರಿದ್ದರು.

Similar News