ರಾಜತಾಂತ್ರಿಕ ಪಾಸ್‌ಪೋರ್ಟ್ ಎಂದರೇನು? ಅದನ್ನು ರಾಹುಲ್ ಗಾಂಧಿ ಮರಳಿಸಿದ್ದೇಕೆ?

Update: 2023-05-27 14:17 GMT

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೇ 31ರಂದು ಅಮೆರಿಕಕ್ಕೆ ಭೇಟಿ ನೀಡಲು ಸಜ್ಜಾಗಿದ್ದಾರೆ. ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಆರೋಪಿಯಾಗಿರುವ ರಾಹುಲ್ 10 ವರ್ಷಗಳ ಅವಧಿಗೆ ಹೊಸ ಸಾಮಾನ್ಯ ಪಾಸ್ಪೋರ್ಟ್ ಪಡೆದುಕೊಳ್ಳಲು ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಒಸಿ)ವನ್ನು ಕೋರಿ ದಿಲ್ಲಿ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ನ್ಯಾಯಾಲಯವು ಅವರಿಗೆ ಮೂರು ವರ್ಷಗಳ ಅವಧಿಗೆ ಸಾಮಾನ್ಯ ಪಾಸ್ಪೋರ್ಟ್ಗಾಗಿ ಎನ್ಒಸಿಯನ್ನು ಮಂಜೂರು ಮಾಡಿದೆ.

ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಸೂರತ್ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಹಿನ್ನೆಲೆಯಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ರಾಹುಲ್ ತನ್ನ ರಾಜತಾಂತ್ರಿಕ ಪಾಸ್ಪೋರ್ಟ್ ಅನ್ನು ಸರಕಾರಕ್ಕೆ ಮರಳಿಸಿದ್ದರು.

ರಾಜತಾಂತ್ರಿಕ ಪಾಸ್ಪೋರ್ಟ್ ಎಂದರೇನು? ಯಾರು ಅದನ್ನು ಹೊಂದಿರಬಹುದು?
ಟೈಪ್ ‘ಡಿ’ ಪಾಸ್ಪೋರ್ಟ್ಗಳು ಎಂದೂ ಕರೆಯಲಾಗುವ ರಾಜತಾಂತ್ರಿಕ ಪಾಸ್ಪೋರ್ಟ್ಗಳನ್ನು ಭಾರತೀಯ ರಾಜತಾಂತ್ರಿಕರು, ಸರಕಾರಿ ಅಧಿಕಾರಿಗಳು ಮತ್ತು ಭಾರತ ಸರಕಾರದ ಪರವಾಗಿ ಅಧಿಕೃತ ವಿದೇಶ ಪ್ರಯಾಣವನ್ನು ಕೈಗೊಳ್ಳಲು ಅಧಿಕಾರ ಹೊಂದಿರುವ ಆಯ್ದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಪಾಸ್ಪೋರ್ಟ್ಗಳು ಮರೂನ್ ಅಥವಾ ಕುಂಕುಮದ ಬಣ್ಣವನ್ನು ಹೊಂದಿರುತ್ತವೆ.

ರಾಜತಾಂತ್ರಿಕ ಪಾಸ್ಪೋರ್ಟ್ 28 ಪುಟಗಳನ್ನು ಹೊಂದಿದ್ದು, ಐದು ವರ್ಷಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಗೆ ವಿತರಿಸಲಾಗುತ್ತದೆ. ಗಾಢ ನೀಲಿ ಬಣ್ಣದ ಹೊದಿಕೆಯನ್ನು ಹೊಂದಿರುವ ಸಾಮಾನ್ಯ ಪಾಸ್ಪೋರ್ಟ್ ಅನ್ನು ವಯಸ್ಕರಿಗೆ 10 ವರ್ಷಗಳ ಮತ್ತು ಅಪ್ರಾಪ್ತ ವಯಸ್ಕರಿಗೆ ಐದು ವರ್ಷಗಳ ಅವಧಿಗೆ ನೀಡಲಾಗುತ್ತದೆ.

ರಾಜತಾಂತ್ರಿಕ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

ಸರಕಾರದ ಪ್ರಕಾರ, ರಾಜತಾಂತ್ರಿಕ/ಅಧಿಕೃತ ಪಾಸ್ಪೋರ್ಟ್ ಗಳಿಗೆ ಅರ್ಜಿಗಳನ್ನು ಸಾಮಾನ್ಯವಾಗಿ ದಿಲ್ಲಿಯ ಪಟಿಯಾಳಾ ಹೌಸ್ ನಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪಾಸ್ಪೋರ್ಟ್ ಸೇವಾ ಕಾರ್ಯಕ್ರಮ (ಪಿಎಸ್ಪಿ) ವಿಭಾಗದಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ. ಆದಾಗ್ಯೂ ವ್ಯಕ್ತಿಯು ತನ್ನ ಹಾಲಿ ವಿಳಾಸದೊಂದಿಗೆ ಲಗತ್ತುಗೊಂಡ ಪಾಸ್ಪೋರ್ಟ್ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ರಾಜತಾಂತ್ರಿಕ ಪಾಸ್ಪೋರ್ಟ್ ನ ಪ್ರಯೋಜನಗಳು

ಅಧಿಕೃತ ಗುರುತು: ರಾಜತಾಂತ್ರಿಕ ಪಾಸ್ಪೋರ್ಟ್ ರಾಜತಾಂತ್ರಿಕ ಕಾರ್ಯಾಚರಣೆಗಳಲ್ಲಿ ಭಾರತ ಸರಕಾರವನ್ನು ಪ್ರತಿನಿಧಿಸುವ ವ್ಯಕ್ತಿಗಳಿಗೆ ಅಧಿಕೃತ ಗುರುತಿನ ದಾಖಲೆಯಾಗಿ ಕಾರ್ಯ ನಿರ್ವಹಿಸುತ್ತದೆ. ತಮ್ಮ ಗುರುತು ಮತ್ತು ಅಧಿಕೃತ ಸ್ಥಾನಮಾನವನ್ನು ಸಾಬೀತುಗೊಳಿಸಲು ರಾಜತಾಂತ್ರಿಕ ಪಾಸ್ಪೋರ್ಟ್ ಅವರಿಗೆ ನೆರವಾಗುತ್ತದೆ.

*ರಾಜತಾಂತ್ರಿಕ ರಕ್ಷಣೆ: ರಾಜತಾಂತ್ರಿಕ ಪಾಸ್ಪೋರ್ಟ್ಗಳನ್ನು ಹೊಂದಿರುವವರು ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಕೆಲವು ವಿಶೇಷ ಸೌಲಭ್ಯಗಳು ಮತ್ತು ರಕ್ಷಣೆಗಳಿಗೆ ಅರ್ಹರಾಗಿರುತ್ತಾರೆ. ಆತಿಥೇಯ ದೇಶದಲ್ಲಿ ಬಂಧನ,ಸ್ಥಾನಬದ್ಧತೆ ಮತ್ತು ಕೆಲವು ಕಾನೂನು ಕ್ರಮಗಳ ವಿರುದ್ಧ ರಕ್ಷಣೆಯನ್ನು ಒದಗಿಸುವ ರಾಜತಾಂತ್ರಿಕ ಪಾಸ್ಪೋರ್ಟ್ ಅವರು ಯಾವುದೇ ಅಡೆತಡೆಗಳಿಲ್ಲದೆ ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಲು ಅವಕಾಶವನ್ನು ಕಲ್ಪಿಸುತ್ತದೆ.

*ವೀಸಾ ಅನುಕೂಲ: ವೀಸಾ ಅನುಕೂಲಕ್ಕೆ ಸಂಬಂಧಿಸಿದಂತೆ ರಾಜತಾಂತ್ರಿಕ ಪಾಸ್ಪೋರ್ಟ್ಗಳು ಕೆಲವು ವಿಶೇಷ ಸೌಲಭ್ಯಗಳನ್ನು ಹೊಂದಿವೆ. ಅನೇಕ ದೇಶಗಳು ರಾಜತಾಂತ್ರಿಕ ಪಾಸ್ಪೋರ್ಟ್ಗಳನ್ನು ಹೊಂದಿರುವವರಿಗಾಗಿ ವೀಸಾ ಸಂಸ್ಕರಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತವೆ ಅಥವಾ ವೀಸಾ ಅಗತ್ಯಗಳನ್ನೇ ಸಂಪೂರ್ಣವಾಗಿ ಕೈಬಿಡುತ್ತವೆ,ಇದು ಅಧಿಕೃತ ಉದ್ದೇಶಗಳಿಗಾಗಿ ಪ್ರಯಾಣದ ವ್ಯವಸ್ಥೆಗಳನ್ನು ಸರಳಗೊಳಿಸುತ್ತದೆ.

*ರಾಜತಾಂತ್ರಿಕ ಸೌಲಭ್ಯಗಳು: ರಾಜತಾಂತ್ರಿಕ ಪಾಸ್ಪೋರ್ಟ್ ವಿಶ್ವಾದ್ಯಂತದ ಭಾರತೀಯ ರಾಯಭಾರ ಕಚೇರಿಗಳು,ದೂತಾವಾಸಗಳು ಮತ್ತು ಸಂಬಂಧಿತ ಇತರ ಕಚೇರಿಗಳು ಒದಗಿಸುವ ರಾಜತಾಂತ್ರಿಕ ಮಾರ್ಗಗಳು ಮತ್ತು ಸೇವೆಗಳನ್ನು ಲಭ್ಯವಾಗಿಸುತ್ತದೆ. ಇದು ವಿದೇಶದಲ್ಲಿರುವಾಗ ಕಾನ್ಸುಲರ್ ಸೇವೆಗಳಿಂದ ನೆರವು,ರಕ್ಷಣೆ ಮತ್ತು ಬೆಂಬಲವನ್ನು ಒಳಗೊಂಡಿರುತ್ತದೆ.

*ಆದ್ಯತಾ ಸೇವೆಗಳು: ರಾಜತಾಂತ್ರಿಕ ಪಾಸ್ಪೋರ್ಟ್ಗಳನ್ನು ಹೊಂದಿರುವವರು ವಿಮಾನ ನಿಲ್ದಾಣಗಳಲ್ಲಿ ಮತ್ತು ವಲಸೆ ಪ್ರಕ್ರಿಯೆ ಸಂದರ್ಭಗಳಲ್ಲಿ ಆದ್ಯತೆಯ ಮೇರೆಗೆ ಸೇವೆಗಳನ್ನು ಪಡೆಯಬಹುದು. ವಿಶೇಷ ವಲಸೆ ಕೌಂಟರ್ಗಳು ಅಥವಾ ತ್ವರಿತ ಭದ್ರತಾ ಮತ್ತು ಕಸ್ಟಮ್ಸ್ ಕ್ಲಿಯರೆನ್ಸ್ ಇವುಗಳಲ್ಲಿ ಸೇರಿದ್ದು,ಪ್ರಯಾಣ ಸಂದರ್ಭದಲ್ಲಿ ಸಮಯವನ್ನು ಉಳಿಸುತ್ತದೆ.

*ಅಧಿಕೃತ ಪ್ರಾತಿನಿಧ್ಯ: ರಾಜತಾಂತ್ರಿಕ ಪಾಸ್ಪೋರ್ಟ್ ಭಾರತ ಸರಕಾರದ ಅಧಿಕೃತ ಪ್ರಾತಿನಿಧ್ಯವನ್ನು ಸೂಚಿಸುತ್ತದೆ ಹಾಗೂ ಅಂತರರಾಷ್ಟ್ರೀಯ ಸಹೋದ್ಯೋಗಿಗಳು,ವಿದೇಶಿ ಅಧಿಕಾರಿಗಳು ಮತ್ತು ರಾಜತಾಂತ್ರಿಕ ಸಮುದಾಯಗಳೊಂದಿಗೆ ವ್ಯವಹರಿಸುವಾಗ ಅಧಿಕಾರ ಮತ್ತು ವಿಶ್ವಾಸಾರ್ಹತೆಯನ್ನು ಒದಗಿಸುತ್ತದೆ.

ಓರ್ವ ನಾಗರಿಕ ರಾಜತಾಂತ್ರಿಕ ಪಾಸ್ಪೋರ್ಟ್ ಪಡೆಯಬಹುದೇ?
ರಾಜತಾಂತ್ರಿಕ ಪಾಸ್ಪೋರ್ಟ್ಗಳನ್ನು ವ್ಯಕ್ತಿಗಳ ಅಧಿಕೃತ ಹುದ್ದೆ ಮತ್ತು ಸರಕಾರದಲ್ಲಿ ಅವರ ಪಾತ್ರಗಳ ಆಧಾರದಲ್ಲಿ ವಿತರಿಸಲಾಗುತ್ತದೆ. ಅವು ಸಾರ್ವಜನಿಕ ಬಳಕೆಗೆ ಲಭ್ಯವಿಲ್ಲ ಮತ್ತು ಜನಸಾಮಾನ್ಯರು ವೈಯಕ್ತಿಕ ಅಥವಾ ಮೋಜಿನ ಪ್ರಯಾಣಕ್ಕೆ ಅವುಗಳನ್ನು ಪಡೆಯಲು ಸಾಧ್ಯವಿಲ್ಲ.

ರಾಜತಾಂತ್ರಿಕ ಪಾಸ್ಪೋರ್ಟ್ಗಳ ವಿತರಣೆ ಮತ್ತು ಬಳಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಿಯಂತ್ರಣದಲ್ಲಿರುತ್ತದೆ ಹಾಗೂ ನಿರ್ದಿಷ್ಟ ನಿಯಮಗಳು ಮತ್ತು ಶಿಷ್ಟಾಚಾರಗಳಿಗೆ ಒಳಪಟ್ಟಿರುತ್ತದೆ.

ಕೃಪೆ: indiatoday.in

Similar News