ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಒಪ್ಪಿಕೊಳ್ಳುವವರ ಸಂಖ್ಯೆ ದುಪ್ಪಟ್ಟು: ವರದಿ

Update: 2023-05-30 13:06 GMT

ಹೊಸದಿಲ್ಲಿ: ಮುಂದಿನ ಲೋಕಸಭಾ ಚುನಾವಣೆಯು ಸಮೀಪಿಸುತ್ತಿರುವಂತೆ 2024ರಲ್ಲಿ ಭಾರತದ ರಾಜಕೀಯವು ಬದಲಾಗಲಿದೆಯೇ ಎನ್ನುವುದು ಜನರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದೊಂದು ಅಕಾಲಿಕ ಪ್ರಶ್ನೆಯಾಗಿದೆ ಮತ್ತು ಇಂದು ನೀಡಲಾಗುವ ಯಾವುದೇ ಉತ್ತರವು ಮುಂದಿನ 11 ತಿಂಗಳುಗಳಲ್ಲಿ ನಡೆಯಬಹುದಾದ ವಿದ್ಯಮಾನಗಳನ್ನು ಅವಲಂಬಿಸಿದೆ. ಆದಾಗ್ಯೂ ಯಾವುದು ಬದಲಾಗುತ್ತಿಲ್ಲ ಮತ್ತು ಈವರೆಗೆ ಯಾವುದು ಬದಲಾಗಿದೆ ಎನ್ನುವುದರ ಕುರಿತು ಕೆಲವು ಸುಳಿವುಗಳು ಕಂಡು ಬರುತ್ತಿವೆ. ಇವು ಸಂಭವನೀಯ ಬದಲಾವಣೆಗಳನ್ನು ಊಹಿಸಲು ಓದುಗರಿಗೆ ಅವಕಾಶವನ್ನು ಒದಗಿಸುತ್ತವೆ.

ಮೋದಿ ಅಲೆ ಸ್ಥಿರ

ಕಳೆದ ಹತ್ತು ವರ್ಷಗಳನ್ನು ಭಾರತೀಯ ರಾಜಕೀಯದ ಮೋದಿ ಯುಗ ಎಂದು ಬಣ್ಣಿಸುವುದು ಉತ್ಪ್ರೇಕ್ಷೆಯಾಗುವುದಿಲ್ಲ. 2014ರಲ್ಲಿ ಬಿಜೆಪಿ ನೇತೃತ್ವದ NDA ಸರಕಾರವನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುವಲ್ಲಿ ಮೋದಿಯವರ ಜನಪ್ರಿಯತೆಯು ಪ್ರಮುಖ ಪಾತ್ರವನ್ನು ವಹಿಸಿತ್ತು ಮತ್ತು 2019ರಲ್ಲಿ ಅದು ಪುನಃ ಅಧಿಕಾರದ ಗದ್ದುಗೆಯೇರುವಲ್ಲಿಯೂ ಮೋದಿ ಅಲೆಯೇ ಪ್ರಮುಖವಾಗಿತ್ತು. ಈ ‘ಮೋದಿ ಫ್ಯಾಕ್ಟರ್ ’ಸ್ಥಿರವಾಗಿರುವಂತೆ ಕಂಡು ಬರುತ್ತಿದೆಯಾದರೂ ಅದು ನಿಶ್ಚಲತೆಯ ಹಂತದಲ್ಲಿದೆ ಎನ್ನುವುದನ್ನು ಸಮೀಕ್ಷೆಯೊಂದು ಬಹಿರಂಗಗೊಳಿಸಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಪ್ರತಿ ಹತ್ತು ಜನರಲ್ಲಿ ನಾಲ್ವರು ಮೋದಿಯವರನ್ನು ಇಷ್ಟ ಪಡುತ್ತಾರೆ ಮತ್ತು ಇದಕ್ಕೂ ಸ್ವಲ್ಪ ಹೆಚ್ಚಿನ ಜನರು ಮೋದಿಯವರನ್ನು ಮತ್ತೆ ಪ್ರಧಾನಿಯಾಗಿ ನೋಡಲು ಬಯಸಿದ್ದಾರೆ, ಆದರೆ 2019ರಿಂದ ಈ ಪ್ರವೃತ್ತಿಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ವಾಸ್ತವದಲ್ಲಿ ಸ್ವಲ್ಪ ಕಡಿಮೆಯೇ ಆಗಿದೆ.

ಇತರ ಹಲವಾರು ಕಾರಣಗಳಿದ್ದರೂ ಎಲ್ಲಕ್ಕಿಂತ ಹೆಚ್ಚಾಗಿ ಮೋದಿಯವರ ಭಾಷಣಗಳು ಮತದಾರರನ್ನು ಮಂತ್ರಮುಗ್ಧಗೊಳಿಸುತ್ತವೆ ಮತ್ತು ಅವರನ್ನು ಮೋದಿಯವರತ್ತ ಸೆಳೆಯುತ್ತವೆ. ಪರಿಣಾಮವಾಗಿ 2024ರಲ್ಲಿ ಬಹುಸಂಖ್ಯಾತ ಮತದಾರರು ಬಿಜೆಪಿಗೆ ಮತ ನೀಡಬಹುದು. ನಾಳೆಯೇ ಚುನಾವಣೆ ನಡೆದರೆ ಬಿಜೆಪಿ ತನ್ನ 2019ರಲ್ಲಿಯ ಮತಗಳಿಕೆ ಪ್ರಮಾಣವನ್ನು ಕಾಯ್ದುಕೊಳ್ಳುತ್ತದೆ ಮತ್ತು ಸ್ವಲ್ಪ ಹೆಚ್ಚೇ ಮತಗಳನ್ನು ಗಳಿಸಬಹುದು ಎಂದು ಸಮೀಕ್ಷೆಯು ಸೂಚಿಸಿದೆ.

ಅತೃಪ್ತಿಯ ಗಾಳಿ

ಆದರೆ ಕಳೆದ ದಶಕದ ಈ ರಾಜಕೀಯ ನಿರಂತರತೆಯಡಿ ಆಸಕ್ತಿದಾಯಕ ‘ಮನಃಸ್ಥಿತಿ ಬದಲಾವಣೆ ’ಯು ಅಡಗಿದೆ. ನಿರಂತರತೆ ಅಥವಾ ಬದಲಾವಣೆಯ ಯಾವುದೇ ವ್ಯಾಖ್ಯಾನವು ಈ ಪ್ರವೃತ್ತಿಗಳ ವಿಭಿನ್ನ ದಿಕ್ಕುಗಳನ್ನು ಸಮನ್ವಯಗೊಳಿಸಬೇಕಾಗುತ್ತದೆ.

ಮೋದಿ ಸರಕಾರದಿಂದ ಅತೃಪ್ತರಿಗಿಂತ ತೃಪ್ತರ ಸಂಖ್ಯೆಯೇ ಹೆಚ್ಚಿರುವಂತೆ ಕಂಡುಬರುತ್ತಿದ್ದರೂ ದತ್ತಾಂಶಗಳನ್ನು ಎಚ್ಚರಿಕೆಯಿಂದ ನೋಡಿದರೆ ಮೋದಿ ಅಧಿಕಾರಾವಧಿಯಲ್ಲಿ ಮೊದಲ ಬಾರಿಗೆ ಸಂಪೂರ್ಣವಾಗಿ ತೃಪ್ತರ ಸಂಖ್ಯೆ ತೀವ್ರವಾಗಿ ಕುಸಿದಿದೆ ಮತ್ತು ಅತೃಪ್ತರ ಸಂಖ್ಯೆ 2019ರಲ್ಲಿಯ ಶೇ.30ರಿಂದ ಇಂದು ಶೇ.40ಕ್ಕೇರಿದೆ ಎನ್ನುವುದು ಕಂಡುಬರುತ್ತದೆ. ವಾಸ್ತವದಲ್ಲಿ ಅಭಿವೃದ್ಧಿ ಕಾರ್ಯಗಳು ಅಥವಾ ಮೂಲಸೌಕರ್ಯ ಕಾರ್ಯಗಳನ್ನು ಹೊರತುಪಡಿಸಿದರೆ ಆರ್ಥಿಕ,ಸಾಮಾಜಿಕ ಅಥವಾ ನೀತಿ ಸಂಬಂಧಿತ ವಿಷಯಗಳಲ್ಲಿ ಮೋದಿ ಕಾರ್ಯವೈಖರಿಯ ಬಗ್ಗೆ ಜನರಲ್ಲಿ ಅತೃಪ್ತಿಯ ಹೊಗೆಯಾಡುತ್ತಿದೆ.

ಹೆಚ್ಚಿದ ರಾಹುಲ್ ಜನಪ್ರಿಯತೆ

ಈ ಒಟ್ಟಾರೆ ನಿರಾಶೆಗೆ ಅನುಗುಣವಾಗಿ ಇನ್ನೊಂದು ಬದಲಾವಣೆಯು ಪರ್ಯಾಯ ನಾಯಕತ್ವ ಮತ್ತು ರಾಜಕೀಯ ಆಯ್ಕೆಗಳ ಕ್ಷೇತ್ರಕ್ಕೆ ಸಂಬಂಧಿಸಿದೆ. ರಾಹುಲ್ ರನ್ನು ಪ್ರಧಾನಿಯನ್ನಾಗಿ ಒಪ್ಪಿಕೊಳ್ಳಲು ಸಿದ್ಧರಿರುವವರ ಸಂಖ್ಯೆ 2014ರಿಂದ ಸರಿಸುಮಾರು ದ್ವಿಗುಣಗೊಂಡಿದೆ, ಆದಾಗ್ಯೂ 2019ರಿಂದ ಅಷ್ಟಕ್ಕೇ ಸೀಮಿತಗೊಂಡಿದೆ. ಅಲ್ಲದೆ, ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ.25ರಷ್ಟು ಜನರು ತಾವು ಯಾವಾಗಲೂ ರಾಹುಲ್ ರನ್ನು ಇಷ್ಟಪಟ್ಟಿದ್ದೇವೆ ಎಂದು ಹೇಳಿದ್ದರೆ, ಇನ್ನೂ ಶೇ.15ರಷ್ಟು ಜನರು ಈ ಗುಂಪಿಗೆ ಇತ್ತೀಚಿಗೆ ಸೇರ್ಪಡೆಗೊಂಡವರಾಗಿದ್ದು, ಇದರ ಹಿಂದೆ ಪ್ರಮುಖವಾಗಿ ಭಾರತ ಜೋಡೊ ಯಾತ್ರೆಯ ಕೊಡುಗೆ ಇದೆ. ಹೆಚ್ಚು ಕುತೂಹಲದ ವಿಷಯವೆಂದರೆ ಹೀಗೆ ಹೊಸದಾಗಿ ಸೇರ್ಪಡೆಗೊಂಡವರಲ್ಲಿ ಅರ್ಧಕ್ಕೂ ಹೆಚ್ಚಿನವರು ಕಾಂಗ್ರೆಸೇತರ ಮತದಾರರಾಗಿದ್ದಾರೆ. ಅವರು ತಮ್ಮ ಆದ್ಯತೆಯ ಪಕ್ಷವಾಗಿ ಕಾಂಗ್ರೆಸ್ ನತ್ತ ಹೊರಳುತ್ತಾರೆಯೇ ಎನ್ನುವುದು ಬಹಳಷ್ಟು ವ್ಯತ್ಯಾಸಗಳನ್ನುಂಟು ಮಾಡಲಿದೆ.

ಮೋದಿ ಧ್ರುವೀಕರಣದ ಅಂಶವಾಗಿಯೇ ಮುಂದುವರಿದಿದ್ದಾರೆ ಎಂದು ಸಮೀಕ್ಷೆಯು ತೋರಿಸಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ.25ರಷ್ಟು ಜನರು ಮೋದಿ ಮತ್ತು ರಾಹುಲ್ ಇಬ್ಬರ ಬಗ್ಗೆಯೂ ಇಷ್ಟವನ್ನಾಗಲೀ ತಿರಸ್ಕಾರವನ್ನಾಗಲೀ ವ್ಯಕ್ತಪಡಿಸಿಲ್ಲ. ಶೇ.23ರಷ್ಟು ಜನರು ಮೋದಿಯವರನ್ನು ಮತ್ತು ಶೇ.16ರಷ್ಟು ಜನರು ರಾಹುಲ್ರನ್ನು ಇಷ್ಟಪಟ್ಟಿಲ್ಲ. ರಾಹುಲ್ ಮೋದಿಗೆ ಸವಾಲಾಗಲಿದ್ದಾರೆ ಎಂದು ಪ್ರತಿ ಮೂವರಲ್ಲಿ ಒಬ್ಬರು ನಂಬಿದ್ದಾರೆ.

ಕಾಂಗ್ರೆಸ್ ಮತಗಳಿಕೆ ಹೆಚ್ಚಿಸಿಕೊಳ್ಳುತ್ತಿದೆ, ಆದರೆ ಇದಕ್ಕೆ ಬೆಲೆ ತೆರುತ್ತಿರುವವರು ಯಾರು?

ಸಾರ್ವಜನಿಕ ಮನಃಸ್ಥಿತಿಯಲ್ಲಿ ಈ ಬದಲಾವಣೆಗಳೊಂದಿಗೆ ಸಹಜವಾಗಿಯೇ ರಾಜಕೀಯ ಆಯ್ಕೆಗಳ ಸಂಭವನೀಯ ಸಂರಚನೆಯಲ್ಲಿ ಬದಲಾವಣೆಯನ್ನು ನಿರೀಕ್ಷಿಸಬಹುದು. ಇನ್ನೂ ಬಿಜೆಪಿ ತನ್ನ ಮತಗಳಿಕೆ ಪಾಲನ್ನು ಕಳೆದುಕೊಳ್ಳುತ್ತಿಲ್ಲ,ಆದರೆ ಕಾಂಗ್ರೆಸ್ ಕಳೆದೆರಡು ಚುನಾವಣೆಗಳಲ್ಲಿ ಶೇ.20ಕ್ಕಿಂತ ಕಡಿಮೆಯಿದ್ದ ತನ್ನ ಮತಗಳಿಕೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ, ನಾಳೆಯೇ ಚುನಾವಣೆ ನಡೆದರೆ ಕಾಂಗ್ರೆಸ್ ಗೆ ಮತ ಚಲಾಯಿಸಲು ಸಿದ್ಧರಾಗಿರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಕಾಂಗ್ರೆಸಿನ ಈ ಹೆಚ್ಚಿನ ಗಳಿಕೆಗೆ ಬಿಜೆಪಿಗಿಂತ ಮುಖ್ಯವಾಗಿ ಇತರ ರಾಜಕೀಯ ಪಕ್ಷಗಳು ಬೆಲೆಯನ್ನು ತೆರುತ್ತಿವೆ,ಅಂದರೆ ಅವುಗಳ ಪಾಲಿನ ಮತಗಳು ಕಾಂಗ್ರೆಸಿಗೆ ಹರಿದು ಬರುತ್ತಿವೆ. ಇದು ಸಂಭವನೀಯ ಬಿಜೆಪಿಯೇತರ ಮೈತ್ರಿಕೂಟ ಮತ್ತು ದ್ವಿಧ್ರುವೀಯ ಸ್ಪರ್ಧೆಗಳಲ್ಲಿ ಬಿಜೆಪಿಯನ್ನು ಪರಾಭವಗೊಳಿಸಲು ಕಾಂಗ್ರೆಸ್ ನ ಸಾಮರ್ಥ್ಯದ ಮೆಲೆ ಪರಿಣಾಮವನ್ನು ಬೀರುತ್ತದೆ.

ಚುನಾವಣೆಗೆ ಇನ್ನೂ 12 ತಿಂಗಳುಗಳು ಬಾಕಿಯಿರುವಾಗ ಇಂದು ಮತದಾರ ಏನು ಯೋಚಿಸುತ್ತಿದ್ದಾನೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ರಾಜಕೀಯವು ‘ಎಕ್ಸ್ ’ಫ್ಯಾಕ್ಟರ್ಗೆ ಕುಖ್ಯಾತವಾಗಿದೆ ಮತ್ತು ಮುಂಬರುವ ವರ್ಷದಲ್ಲಿ ತೆರೆದುಕೊಳ್ಳುವ ರಾಜಕೀಯವು ಇಂತಹ ಅನೇಕ ‘ಎಕ್ಸ್’ ಫ್ಯಾಕ್ಟರ್ಗಳನ್ನು ಅನಾವರಣಗೊಳಿಸಲಿದೆ. ಉದಾಹರಣೆಗೆ ಸಮೀಕ್ಷೆಯು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಹುಲ್ ನಂತರ ಮೋದಿಯವರಿಗೆ ಪ್ರಮುಖ ಸವಾಲಾಗಿ ಹೊರಹೊಮ್ಮಲಿದ್ದಾರೆ ಎನ್ನುವುದನ್ನು ಸೂಚಿಸಿದೆ. ಶೇ.11ರಷ್ಟು ಜನರು ಕೇಜ್ರಿವಾಲ್ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕಿಂತಲೂ ಮಿಗಿಲಾಗಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಪ್ರತಿ ಐವರಲ್ಲಿ ಒಬ್ಬರು ಮೋದಿ ಅನುಪಸ್ಥಿತಿಯಲ್ಲಿ (ಅವರು ಸ್ಪರ್ಧಿಸದಿದ್ದರೆ) ಅವರ ಸಂಭಾವ್ಯ ಪರ್ಯಾಯವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರನ್ನು ಗುರುತಿಸಿದ್ದಾರೆ.

ಈ ಅಜ್ಞಾತ ಅಂಶಗಳನ್ನು ಹೊರತುಪಡಿಸಿದರೆ ಸಾರ್ವಜನಿಕರ ಚಿತ್ತವು ನಾಯಕನಾಗಿ ಮೋದಿಯವರತ್ತ ಆಕರ್ಷಣೆ ಮತ್ತು ಮೋದಿ ಸರಕಾರದ ಕುರಿತು ನಿರಾಶೆ ಇವುಗಳ ಸೂಕ್ಷ್ಮ ಸಂದಿಗ್ಧತೆಯಿಂದ ಕೂಡಿರುವಂತಿದೆ. ಈ ಸಂದಿಗ್ಧತೆಯು ಮುಂಬರುವ ದಿನಗಳು ಮತ್ತು ತಿಂಗಳುಗಳಲ್ಲಿ ರಾಜಕೀಯದ ದಾರಿಯನ್ನು ನಿರ್ಧರಿಸಬಹುದು.

ಕೃಪೆ: Theprint.in

Similar News