ಸಂವಿಧಾನಕ್ಕೆ ಅಪಚಾರ ನ್ಯಾಯಾಧೀಶರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯ

Update: 2024-01-27 16:41 GMT

ಬೆಂಗಳೂರು: ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಹುಟ್ಟಿದ ನೆಲದಲ್ಲಿ ಈ ರೀತಿಯ ಘಟನೆಗಳು ನಡೆದಿರುವುದು ತೀವೃ ಕಳವಳಕಾರಿಯಾಗಿದ್ದು, ಕೂಡಲೇ ನ್ಯಾಯಾಧೀಶರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಖಿಲ ಭಾರತ ವಿದ್ಯಾರ್ಥಿ ಸಂಘ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.

ಶನಿವಾರ ಪ್ರಕಟನೆ ಹೊರಡಿಸಿದ್ದು, ತೀರ್ಥಹಳ್ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಎಸ್.ಎಸ್.ಭರತ್ ಅವರು ನಮ್ಮ ಧರ್ಮ ಗ್ರಂಥ ಭಗವದ್ಗೀತೆಯು ಸಂವಿಧಾನಕ್ಕೆ ಸಮವಾಗಿದೆ ಎಂದಿರುವುದಲ್ಲದೇ ಜೈ ಶ್ರೀರಾಮ್ ಎಂದು ಘೋಷಣೆ ಹಾಕಿರುವ ಬಗ್ಗೆ ವರದಿಯಾಗಿದೆ. ಈ ಕಾರ್ಯಕ್ರಮದ ಸಂಘಟಕರು ಭಗವದ್ಗೀತೆ ಪ್ರತಿಯನ್ನು ಸಭಿಕರಿಗೆ ಹಂಚಿರುವ ಬಗ್ಗೆ ವರದಿಯಾಗಿದೆ. ಈ ದೇಶದ ಉನ್ನತ ಸ್ಥಾನದಲ್ಲಿರುವ ನ್ಯಾಯಾಧೀಶರ ಈ ನಡವಳಿಕೆಯನ್ನು ಖಂಡಿಸಿದೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಗವದ್ಗೀತೆಯ ಕುರಿತು ಸುದೀರ್ಘ ವಿಶ್ಲೇಷಣೆ ನಡೆಸಿ ಬರೆದಿರುವ ಕೃತಿಯಲ್ಲಿ ಸ್ಪಷ್ಟ ಮಾತುಗಳಲ್ಲಿ ಹೇಳಿರುವುದೇನೆಂದರೆ, ‘ಭಗವದ್ಗೀತೆಯು ಯುದ್ಧ ಮತ್ತು ಹಿಂಸೆಗೆ ತಾತ್ವಿಕ ಸಮರ್ಥನೆ ಒದಗಿಸುವ ಗ್ರಂಥ. ಅದು ಚಾತುರ್ವಣ್ರ್ಯ ವ್ಯವಸ್ಥೆಗೆ ಸಮರ್ಥನೆ ಒದಗಿಸುವ ಹಾಗೂ ಮೋಕ್ಷ ಸಿಗಲು ಯಜ್ಞ ಯಾಗದಂತ ವೈದಿಕ ಕರ್ಮ ಮಾರ್ಗಗಳನ್ನು ಉಪದೇಶಿಸುವ ಒಂದು ಪ್ರತಿಕ್ರಾಂತಿ ತತ್ವ ಹೊಂದಿರುವ ಗ್ರಂಥ’ ಎಂದಿದ್ದಾರೆ.

ಅಷ್ಟೇ ಅಲ್ಲದೇ ಬೌದ್ಧ ಧರ್ಮ ಪ್ರತಿಪಾದಿಸಿದ್ದ ಕ್ರಾಂತಿಕಾರಕ ಹಾಗೂ ವೈಚಾರಿಕ ತತ್ವಗಳ ಮೇಲೆ ದಾಳಿ ನಡೆಸುವ ತತ್ವ ಹೊಂದಿರುವ ಗ್ರಂಥ ಭಗವದ್ಗೀತೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ಭಾರತದ ಸಂವಿಧಾನದ ತತ್ವಗಳು ಅಹಿಂಸೆ, ಸಮಾನತೆ ಹಾಗೂ ನ್ಯಾಯದ ತತ್ವಗಳನ್ನು ಹೇಳುತ್ತದೆ. ಹೀಗಿರುವಾಗ ನ್ಯಾಯಾಧೀಶರು ಭಗವದ್ಗೀತೆ ಸಂವಿಧಾನಕ್ಕೆ ಸಮವಾಗುತ್ತದೆ ಎಂದು ಹೇಳಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ವಿದ್ಯಾರ್ಥಿ ಸಂಘ ಕರ್ನಾಟಕ ರಾಜ್ಯ ಸಮಿತಿ ಟೀಕಿಸಿದೆ.

ನ್ಯಾಯಮೂರ್ತಿಯೊಬ್ಬರು ಜೈಶ್ರೀರಾಮ್ ಎಂದು ವಿದ್ಯಾರ್ಥಿಗಳ ಎದುರು ಘೋಷಣೆ ಮಾಡುವುದಾಗಲೀ ಸಂವಿಧಾನ ವಿರೋದಿ ಕೃತ್ಯವಾಗುತ್ತದೆ. ‘ಉನ್ನತ ಸ್ಥಾನದಲ್ಲಿ ಕುಳಿತವರು ಜೈಶ್ರೀರಾಮ್ ಎಂದು ಹೇಳಿದರೆ, ಕಾಲೇಜೊಂದು ಹೀಗೆ ರಾಜಕೀಯ ಕೇಂದ್ರವಾದರೆ ಅಲ್ಲಿ ವ್ಯಾಸಾಂಗ ಮಾಡುವ ಮಕ್ಕಳು ಪೂರ್ವಾಗ್ರಹಪೀಡಿತರಾಗುವ ಸಾಧ್ಯತೆ ಇರುತ್ತದೆ. ಹೊರಗಡೆ ರಾಜಕೀಯ ಧಾರ್ಮಿಕ ಉನ್ಮಾದ ವಾತಾವರಣ ಇರುವಾಗ ಕಾಲೇಜುಗಳು ವಿದ್ಯಾರ್ಥಿಗಳಲ್ಲಿ ಸಂಯಮ, ಸಹಬಾಳ್ವೆ, ಸರ್ವಧರ್ಮ ಸಮನ್ವಯಗಳನ್ನು ಬೋಧಿಸಬೇಕು, ಸಂವಿಧಾನದ ಮೌಲ್ಯಗಳನ್ನು ತಿಳಿಸಬೇಕು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News