ಸದನದಲ್ಲಿ ಅವಾಚ್ಯ ಶಬ್ದ ಬಳಸಿದ ಯತ್ನಾಳ್: ಅನುಮತಿಸಿದ ಸ್ಪೀಕರ್..!

Update: 2024-02-28 18:28 GMT

ಬೆಂಗಳೂರು : ಘೋಷಣೆ ವಿಚಾರ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಬಸವನಗೌಡ ಪಾಟೀಲ್ ಯತ್ನಾಳ್, ತಮ್ಮ ಭಾಷಣದಲ್ಲಿ ಅವಾಚ್ಯ ಶಬ್ದ ಉಲ್ಲೇಖಿಸಿದರು. ಆಗ ಆಡಳಿತರೂಢ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ, ‘ಇಂತಹ ಪದ ಬಳಕೆಗೆ ನನ್ನ ಅನುಮತಿ ಇದೆ’ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಸಮ್ಮತಿ ಸೂಚಿಸಿದರು.

ಬುಧವಾರ ವಿಧಾನಸಭೆಯಲ್ಲಿ ಪಾಕಿಸ್ತಾನ ಪರ ಘೋಷಣೆ ವಿಚಾರವಾಗಿ ಮಾತನಾಡಿದ ಬಸವನಗೌಡ ಪಾಟೀಲ್ ಯತ್ನಾಳ್, ‘ಇಂತಹ ಘಟನೆ ಯಾರೇ ಮಾಡಿದರೂ ಕ್ರಮ ಆಗಲಿ. ಪಾಕಿಸ್ತಾನ ಪರ ಘೋಷಣೆ ಕೂಗುವವರು ದೇಶದ್ರೋಹಿಗಳು. ದೇಶದ ಅನ್ನ ತಿಂದು ಈ ರೀತಿಯ ಹೇಳಿಕೆ ಕೊಟ್ಟವರು ಎಂದು ಆಕ್ಷೇಪಾರ್ಹ ಶಬ್ದ ಬಳಕೆ ಮಾಡಿದರು.

ಇದಕ್ಕೆ ಕಾಂಗ್ರೆಸ್ ಸದಸ್ಯ ಬಸವರಾಜ ರಾಯರೆಡ್ಡಿ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿ, ಸದನದಲ್ಲಿ ಇಂತಹ ಭಾಷೆ ಬಳಕೆ ಬೇಡ ಎಂದು ಹೇಳಿದರು. ಅನಂತರ, ಯತ್ನಾಳ್, ಅವರನ್ನು ಮುತ್ತೈದೆ ಮಕ್ಕಳು ಕರೆಯಬೇಕಾ? ಎಂದು ಕೇಳಿದರು. ಈ ವೇಳೆ ರಾಯರೆಡ್ಡಿ, ಹಾಗಾದರೆ ಬೇರೆಯವರು ಇಂತಹ ಪದಗಳು ಹೇಳಬಹುದಾ? ಎಂದು ಪ್ರಶ್ನಿಸಿದರು.

ಇದಕ್ಕೆ ಸ್ಪೀಕರ್ ಖಾದರ್, ‘ನೀವೂ ಬಳಕೆ ಮಾಡಿ, ನಾನು ಅನುಮತಿ ನೀಡುವೆ. ಅಲ್ಲದೆ, ಪಾಕಿಸ್ತಾನ ವಿರುದ್ಧ ಏನೇ ಪದ ಪ್ರಯೋಗ ಮಾಡಲು ನಿಮಗೆ ಅನುಮತಿ ಇದೆ’ ಎಂದು ಹೇಳಿದರು. ಸ್ಪೀಕರ್ ಮಾತನ್ನು ಬೆಂಬಲಿಸಿದ ಯತ್ನಾಳ್, ‘ಅಲ್ಲಲ್ಲಿ ನಿಮ್ಮಂತ ದೇಶಪ್ರೇಮಿಗಳು ಇದ್ದಾರೆ. ಈ ಘೋಷಣೆ ಕೇವಲ ಮೊದಲನೆಯ ಮಹಡಿಯಲ್ಲಿ ಆಗಿಲ್ಲ. ಕೆಳಮಹಡಿಯಲ್ಲಿ ಆಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಒಂದು ನಿರ್ಣಯ ಮಾಡಬೇಕು’ ಎಂದು ಒತ್ತಾಯಿಸಿದರು.

ಪಾಕಿಸ್ತಾನ ಪರ ಇರುವವರನ್ನು ಬೈದರೆ ತಪ್ಪಲ್ಲ. ಯಾರೂ ನೂರಕ್ಕೆ ನೂರರಷ್ಟು ಸರಿ ಇರುವುದಿಲ್ಲ. ಅಲ್ಲದೆ, ಪಾಕಿಸ್ತಾನ ಪರ ಇರುವವರನ್ನು ಟೀಕಿಸಲು ಯಾವ ಭಾಷೆ ಬೇಕಾದರೂ ಬಳಕೆ ಮಾಡಲಿ, ಅದಕ್ಕೆ ಆಕ್ಷೇಪ ಇಲ್ಲ’

-ಯು.ಟಿ.ಖಾದರ್, ಸ್ಪೀಕರ್, ವಿಧಾನಸಭೆ

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News