MBBS ಮುಗಿಸಿದ 'ಅನಿವಾಸಿ ಕನ್ನಡಿಗ' ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪ್ರವೇಶಾತಿಗೆ KEA ಅರ್ಹತಾ ನಿಯಮದ ಸಮಸ್ಯೆ ನಿವಾರಣೆಗೆ ಆಗ್ರಹ: ಸಿಎಂಗೆ ಆರತಿ ಕೃಷ್ಣ ಮನವಿ
ಬೆಂಗಳೂರು: ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ ಕರ್ನಾಟಕ ಮೂಲದ ಎನ್.ಆರ್.ಐ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ (MD/MS) ವೈದ್ಯಕೀಯ ಪ್ರವೇಶದಲ್ಲಿ KEA ಅರ್ಹತಾ ನಿಯಮದ ಸಮಸ್ಯೆ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯೆ ಆರತಿ ಕೃಷ್ಣ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಪ್ರಸಕ್ತ KEA ನಿಯಮದ ಪ್ರಕಾರ, ಕರ್ನಾಟಕದ ಎನ್.ಆರ್.ಐ. ಮಕ್ಕಳಿಗೆ ಕರ್ನಾಟಕದಲ್ಲಿ 10 ವರ್ಷ ಓದಿರದಿದ್ದರೂ, ತಂದೆ/ತಾಯಿ ಯಾರಾದರೂ ಕರ್ನಾಟಕದಲ್ಲಿ ಕನಿಷ್ಠ ಏಳು ವರ್ಷ ಓದಿದ್ದರೆ (KCET/NEET-UG ನ Clause-b - ಹೊರನಾಡು/ಗಡಿನಾಡು ಕನ್ನಡಿಗ ಕೋಟಾ) BE/MBBS ಪ್ರವೇಶಕ್ಕೆ ಅವಕಾಶವಿದೆ. ಈ ನಿಯಮದಡಿ ಸಾವಿರಾರು ಸಾಗರೋತ್ತರ ಕನ್ನಡಿಗ ಮಕ್ಕಳು ಕರ್ನಾಟಕದ ಸರಕಾರಿ/ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 5.5 ವರ್ಷಗಳ MBBS ಪೂರ್ಣಗೊಳಿಸಿ, ಇಂಟರ್ನ್ಶಿಪ್ ಮತ್ತು ಕಡ್ಡಾಯ ಗ್ರಾಮೀಣ ಸೇವೆಯನ್ನು ಸಹ ಪೂರ್ಣಗೊಳಿಸಿದ್ದಾರೆ. ಆದರೆ, ಇದೇ ವಿದ್ಯಾರ್ಥಿಗಳು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ (MD/MS) A KEA PGET ಮೂಲಕ ಅರ್ಜಿ ಸಲ್ಲಿಸಿದಾಗ, KEA ಈಗ 1ನೇ ತರಗತಿಯಿಂದ 12ನೇ ತರಗತಿವರೆಗೆ ಕರ್ನಾಟಕದಲ್ಲಿ 10 ವರ್ಷದ ವ್ಯಾಸಂಗ ಕಡ್ಡಾಯ ಎಂದು ಕೇಳುತ್ತಿದೆ. ಇದರಿಂದ 'ಅನಿವಾಸಿ ಕನ್ನಡಿಗ' ವಿದ್ಯಾರ್ಥಿಗಳು ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
PGET-2025 ಮಾಹಿತಿ ಪುಸ್ತಕದ Clause 8.1ರ ಪ್ರಕಾರ: (a) ಕರ್ನಾಟಕ ರಾಜ್ಯದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ MBBS/BDS ವ್ಯಾಸಂಗ ಮಾಡಿ ಉತ್ತೀರ್ಣರಾದ ಭಾರತೀಯ ಪ್ರಜೆಯಾಗಿರಬೇಕು ಅಥವಾ (b) ಕರ್ನಾಟಕದಲ್ಲಿ 10 ವರ್ಷ ವ್ಯಾಸಂಗ ಮಾಡಿದವರಾಗಿರಬೇಕು.
KEA ಕ್ಷೇತ್ರ ಅಧಿಕಾರಿಗಳು Clause-a ಅಭ್ಯರ್ಥಿಗಳಿಗೂ Clause-b ನಿಯಮವನ್ನು ಅನ್ವಯಿಸಿ, ಕರ್ನಾಟಕದಲ್ಲಿ MBBS ಮಾಡಿದರೂ 10 ವರ್ಷದ ಅಧ್ಯಯನ ಪ್ರಮಾಣಪತ್ರ ಕೇಳಿ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ. ಇದರಿಂದ ಅವರು ಕೇವಲ Open ಸೀಟುಗಳಿಗೆ ಮಾತ್ರ ಸ್ಪರ್ಧಿಸಬೇಕಾಗಿದೆ. ಇದು ಸುಪ್ರೀಂ ಕೋರ್ಟ್ ಆಫ್ ಇಂಡಿಯಾದ ಡಾ. ಕೃತಿ ಲಖಿನಾ ಮತ್ತು ಇತರರು Vs ಕರ್ನಾಟಕ ಸರ್ಕಾರ (WP Civil No. 306/2018, ದಿನಾಂಕ 04.04.2018) ತೀರ್ಪಿಗೆ ವಿರುದ್ಧವಾಗಿದೆ. ಆ ತೀರ್ಪಿನಲ್ಲಿ ಕರ್ನಾಟಕದಲ್ಲಿ MBBS ಮಾಡಿದವರಿಗೆ ರಾಜ್ಯ ಕೋಟಾದಲ್ಲಿ 10 ವರ್ಷದ ನಿವಾಸದ ಷರತ್ತು ವಿಧಿಸುವುದನ್ನು ನ್ಯಾಯಾಲಯವು ರದ್ದುಪಡಿಸಿ, ಕರ್ನಾಟಕದಲ್ಲಿ MBBS ಮಾಡಿದರೆ ಸಾಕು ರಾಜ್ಯ ಕೋಟಾಕ್ಕೆ ಅರ್ಹರು ಎಂದು ನಿರ್ದೇಶಿಸಿತ್ತು. UG ಗೆ ಕರ್ನಾಟಕ ಅಭ್ಯರ್ಥಿಯಾಗಿ ಪ್ರವೇಶ ಪಡೆದು, ಅದೇ ರಾಜ್ಯದಲ್ಲಿ PG ಗೆ ಪರರಾಜ್ಯ ಅಭ್ಯರ್ಥಿಯಾಗುವುದು - ಇದು ನ್ಯಾಯಸಮ್ಮತವಲ್ಲ, ಸಂವಿಧಾನದ 14ನೇ ವಿಧಿಗೆ ವಿರುದ್ಧವಾಗಿದೆ ಎಂದವರು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಆದ್ದರಿಂದ ಸುಮಾರು 18 ಲಕ್ಷ ಸಾಗರೋತ್ತರ ಕನ್ನಡಿಗರ ಹಿತದೃಷ್ಟಿಯಿಂದ ಈ ಕೆಳಗಿನ ಕ್ರಮ ಕೈಗೊಳ್ಳುವಂತೆ ಅವರು ಮುಖ್ಯಮಂತ್ರಿಯನ್ನು ಕೋರಿದ್ದಾರೆ.
1. PGET 2025-26 / 2026-27 ಮಾಹಿತಿ ಪುಸ್ತಕಕ್ಕೆ ತಿದ್ದುಪಡಿ (Corrigendum) ಹೊರಡಿಸಿ, UG ನಲ್ಲಿ ತಂದೆ/ತಾಯಿ 7 ವರ್ಷದ ವ್ಯಾಸಂಗದ Clause-b ಅಡಿ ಕರ್ನಾಟಕದಲ್ಲಿ MBBS ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು PG ಗೆ Clause-a ಅಡಿ G ಸೀಟುಗಳಿಗೆ ಅರ್ಹರು ಎಂದು ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಬೇಕು.
2. ಪರ್ಯಾಯವಾಗಿ, ಕರ್ನಾಟಕದಲ್ಲಿ ಮಾಡಿದ 5.5 ವರ್ಷದ MBBS ವ್ಯಾಸಂಗವನ್ನು 10 ವರ್ಷದ ಅವಧಿಗೆ ಸೇರಿಸಿ ಪರಿಗಣಿಸಬೇಕು, ಅಥವಾ PG ಗಾಗಿ "NRI-ಕರ್ನಾಟಕ MBBS ಪದವೀಧರ" ಎಂಬ ಹೊಸ ಉಪ-ಕ್ಲಾಸ್ ರಚಿಸಬೇಕು.
3. ಕರ್ನಾಟಕ ವಿಶ್ವವಿದ್ಯಾನಿಲಯ (RGUHS) ದಿಂದ MBBS ಪದವಿ ಪ್ರಮಾಣಪತ್ರ ನೀಡುವ ಅಭ್ಯರ್ಥಿಗಳಿಗೆ 10 ವರ್ಷದ ವ್ಯಾಸಂಗ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಬಾರದು ಎಂದು KEA ಗೆ ನಿರ್ದೇಶನ ನೀಡಬೇಕು.
4. ಈ ಸಮಸ್ಯೆಯನ್ನು ಪರಿಹರಿಸಲು ನೂತನವಾಗಿ ರಚನೆಯಾಗಿರುವ ಜಾಗತಿಕ ಹೂಡಿಕೆ ಮತ್ತು NRI ವ್ಯವಹಾರಗಳ ಇಲಾಖೆಯ ಮೂಲಕ ಕುಂದುಕೊರತೆ ಕೋಶ (Grievance Cell) ರಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
NEET-PG ಕೌನ್ಸೆಲಿಂಗ್ 2025-26 ಪ್ರಕ್ರಿಯೆ ನಡೆಯುತ್ತಿರುವುದರಿಂದ ಇದನ್ನು ಅತ್ಯಂತ ತುರ್ತಾಗಿ ಪರಿಗಣಿಸಿ DME ಮತ್ತು KEA ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಸಭೆ ನಡೆಸಿ ಪರಿಹಾರ ಕಲ್ಪಿಸಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.