×
Ad

ಲಂಚವಿಲ್ಲದೇ ಖಾತಾ ಪರಿವರ್ತನೆ, ಮನೆ ಬಾಗಿಲಿಗೆ ಇ-ಖಾತೆ: ಡಿ.ಕೆ.ಶಿವಕುಮಾರ್

"ಪ್ರತಿ ಶನಿವಾರ ‘ನನ್ನ ಇ- ಖಾತೆ' ಅಭಿಯಾನ: ಭೂಮಿ ಗ್ಯಾರಂಟಿ"

Update: 2026-05-16 22:40 IST

ಬೆಂಗಳೂರು, ಮೇ 16: ‘ನನ್ನ ಇ-ಖಾತಾ, ನನ್ನ ಹಕ್ಕು’ ಅಭಿಯಾನದಿಂದ ಬೆಂಗಳೂರಿನ ಸಾರ್ವಜನಿಕರು ಒಂದು ರೂ.ಲಂಚ ನೀಡದೆ ತಮ್ಮ ಆಸ್ತಿಗಳನ್ನು ‘ಬಿ' ಖಾತೆಯಿಂದ ‘ಎ' ಖಾತೆಗೆ ಪರಿವರ್ತನೆ ಹಾಗೂ ಮನೆ ಬಾಗಿಲಲ್ಲೇ ಇ-ಖಾತೆ ಪಡೆಯಬಹುದು. ಏಳು ಲಕ್ಷ ಜನರಿಗೆ ಇದರಿಂದ ಉಪಯೋಗವಾಗಲಿದೆ. ಬೆಂಗಳೂರು ನಿವಾಸಿಗಳು, ಅರ್ಜಿದಾರರು ಈ ಅಭಿಯಾನದಿಂದ ಖುಷಿಯಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಶನಿವಾರ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಹೊರಮಾವಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನಲ್ಲಿ ಆರಂಭವಾದ ‘ನನ್ನ ಇ-ಖಾತಾ, ನನ್ನ ಹಕ್ಕು’ ಅಭಿಯಾನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ‘ಖಾತೆ ದಾಖಲೆಯಲ್ಲಿ ಫೊಟೋ ಇರಲಿದೆ. ಯಾರಾದರೂ ನಕಲಿ ದಾಖಲೆ ನೀಡಿ ಖಾತೆ ಮಾಡಿಸಿಕೊಂಡರೆ ಅದನ್ನು ರದ್ದು ಮಾಡುವ ವ್ಯವಸ್ಥೆ ಇದೆ. ನಿಗದಿತ ನಂಬರ್ ನೀಡಿದ ತಕ್ಷಣ 2004ರ ನಂತರದ ಎಲ್ಲ ದಾಖಲೆಗಳು ದೊರೆಯುತ್ತವೆ. ಉಪನೋಂದಣಾಧಿಕಾರಿಗಳ ಕಚೇರಿಗೆ ಲಿಂಕ್ ಮಾಡಲಾಗಿದೆ. ಅರ್ಹ ಮಾಲಕರಿಗೆ ಖಾತೆ ಮಾಡಿಕೊಡಲಾಗುವುದು ಎಂದರು.

ಪ್ರತಿ ಶನಿವಾರ ಅಭಿಯಾನ: ‘ನಿಮ್ಮ ಆಸ್ತಿ ಮೌಲ್ಯಗಳನ್ನು ಹೆಚ್ಚಳ ಮಾಡಲು ‘ಬಿ’ ಖಾತೆಯಿಂದ ‘ಎ’ ಖಾತೆಗೆ ಪರಿವರ್ತನೆ ಮಾಡಿಕೊಡಲಾಗುತ್ತಿದೆ. ಇದು ಐತಿಹಾಸಿಕ ತೀರ್ಮಾನ. ಇದರಿಂದ ನೀವು ಬ್ಯಾಂಕ್ ನಲ್ಲಿ ಸಾಲ ಪಡೆಯಬಹುದು ಹಾಗೂ ಇತರೇ ಸೌಲಭ್ಯಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಬೆಂಗಳೂರಿನಲ್ಲಿರುವ 23ಲಕ್ಷ ಆಸ್ತಿಗಳಲ್ಲಿ 16ಲಕ್ಷ ‘ಎ’ ಖಾತೆಗಳಿದ್ದರೆ 7 ಲಕ್ಷ ‘ಬಿ’ ಖಾತೆಗಳಿವೆ. ಕೆಳಮಟ್ಟದ ಅಧಿಕಾರಿಗಳು ಖಾತೆ ವಿಚಾರವಾಗಿ ಲಂಚ ಪಡೆದು ಕಿರುಕುಳ ನೀಡುತ್ತಿದ್ದರು ಎನ್ನುವುದು ನನ್ನ ಗಮನಕ್ಕೆ ಬಂದಿತ್ತು. ಅದಕ್ಕಾಗಿ ಪ್ರತಿ ಶನಿವಾರ ಅಭಿಯಾನ ನಡೆಯಲಿದೆ ಎಂದು ಅವರು ತಿಳಿಸಿದರು.

ನಿಮ್ಮ ಆಸ್ತಿ ದಾಖಲೆಗಳಲ್ಲಿ ತೊಂದರೆಯಿದ್ದರೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಿದ್ದಾರೆ. ನಿಮ್ಮ ಆಸ್ತಿಗಳಿಗೆ ಗುರುತಿನ ಸಂಖ್ಯೆ ನೀಡಲಾಗಿರುತ್ತದೆ. ಇದನ್ನು ಬಳಸಿಕೊಂಡು ತಪ್ಪಿರುವ ದಾಖಲೆಗಳನ್ನು ಸರಿ ಮಾಡಲಾಗುವುದು. ನಿಮ್ಮ ಆಸ್ತಿ ಮೌಲ್ಯದ ಶೇ.5ರಷ್ಟು ಮೊತ್ತವನ್ನು ಕಟ್ಟಬೇಕಿತ್ತು. ಆದರೆ, 100 ದಿನಗಳ ಕಾಲ ರಿಯಾಯಿತಿ ನೀಡಿದ್ದು ಶೇ.2ರಷ್ಟು ಶುಲ್ಕ ಪಾವತಿ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದು ಸಾರ್ವಜನಿಕರಿಗೆ ಸುವರ್ಣಾವಕಾಶ. ನಿಮ್ಮ ಖಾತೆಯನ್ನು ನಾವೇ ಫೈಲ್ ರೂಪದಲ್ಲಿಯೇ ನೀಡುತ್ತೇವೆ. ಅದರಲ್ಲಿ ನಿಮ್ಮ ಹಾಗೂ ಮನೆಯ ಫೋಟೋ ಇರುತ್ತದೆ. ಆನ್‍ಲೈನ್ ಮೂಲಕವೂ ಡೌನ್‍ಲೋಡ್ ಮಾಡಿಕೊಳ್ಳಬಹುದು. ಯಾರೂ ಇದನ್ನು ನಕಲು ಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಸಾರ್ವಜನಿಕರು ಯಾರಿಗೂ ಒಂದೇ ಒಂದು ರೂ.ಲಂಚ ನೀಡಬಾರದು. ಅಧಿಕಾರಿಗಳಿಗೆ ಸೇರಿದಂತೆ ಯಾವ ಪಕ್ಷದವರಿಗೂ ಲಂಚ ಕೊಡಬಾರದು. ಸರಕಾರಿ ಭೂಮಿಗಳನ್ನು ಮಂಜೂರು ಮಾಡಲು ಸಾಧ್ಯವಿಲ್ಲ. ನಾವು ಇಡೀ ದೇಶದಲ್ಲಿಯೇ ಮಾದರಿಯಾಗಿದ್ದೇವೆ. ಕೇಂದ್ರ ಸರಕಾರವು ಒಳ್ಳೆ ಕೆಲಸ ಮಾಡುತ್ತಿದ್ದೀರಿ ಎಂದು ಶ್ಲಾಘಿಸಿದ್ದಾರೆ. ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ನೀಡುತ್ತಿದ್ದೇವೆ. ನೀವು ತೆಗೆದುಕೊಂಡ ನಿವೇಶನ ಅಂದು ಕಡಿಮೆ ಬೆಲೆಯದ್ದಾಗಿದ್ದರೆ ಖಾತೆ ಬದಲಾವಣೆಯಿಂದ ಆಸ್ತಿ ಬೆಲೆ ಹೆಚ್ಚಳವಾಗಲಿದೆ ಎಂದರು.

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News