ಪ್ರಸ್ತುತ ಜಗತ್ತಿಗೆ ‘ಗಾಂಧೀಜಿ’ ಅತ್ಯವಶ್ಯಕ : ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2026-07-31 23:06 IST

ಬೆಂಗಳೂರು : ದೇಶದೊಳಗೆ ಪ್ರಸ್ತುತ ರಾಜಕಾರಣ, ಧರ್ಮಕಾರಣ ಕೆಟ್ಟಿದೆ. ಕೆಟ್ಟ ಮನಸ್ಸುಗಳು ರಾಜಕೀಯಕ್ಕೆ ಬಂದಿವೆ. ಜೊತೆಗೆ ಧೂರ್ತರುಗಳು ಧರ್ಮಕಾರಣದೊಳಗೆ ಇದ್ದಾರೆ. ಪೊಕ್ಸೊ ಕಾಯಿದೆ ಅಡಿಯಲ್ಲಿ ಜೈಲಿಗೆ ಹೋಗಬೇಕಾದ ಹಲವರು ಧಾರ್ಮಿಕ ಕ್ಷೇತ್ರದಲ್ಲಿದ್ದಾರೆ. ಇಂತಹ ಸನ್ನಿವೇಶದೊಳಗೆ ಇಡೀ ಜಗತ್ತಿಗೆ ಮಹಾತ್ಮ ಗಾಂಧೀಜಿ ಅತ್ಯವಶ್ಯಕ ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ನಗರದ ಗಾಂಧಿಭವನದಲ್ಲಿ ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯ 10ನೇ ವರ್ಷದ ಘಟಿಕೋತ್ಸವ, ರಾಜ್ಯಮಟ್ಟದ ಯುವ ಪ್ರೇರಣಾ ಕಾರ್ಯಾಗಾರ, 2026-27ನೇ ಸಾಲಿನ ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಕೃತಿಯನ್ನು ಸಂರಕ್ಷಿಸುತ್ತಾ ನಮ್ಮ ಆಸೆಗಳನ್ನು ಪೂರೈಸಿಕೊಳ್ಳುವುದಕ್ಕೆ ತೊಡಗಿದರೆ ನಮ್ಮ ಬದುಕು ಹಸನಾಗುತ್ತದೆ. ಸುಖ, ಸಂತೋಷದಿಂದ ಇರುತ್ತದೆ.. ಆದರೆ ಪ್ರಕೃತಿಯನ್ನು ಸರ್ವ ನಾಶ ಮಾಡಲು ಹೊರಟರೆ ನಮ್ಮ ಬದುಕೇ ನಾಶವಾಗುತ್ತದೆ ಎಂದರು.

21 ವರ್ಷ ದಕ್ಷಿಣ ಆಫ್ರಿಕಾದಲ್ಲಿ ಇದ್ದು ಬಂದ ಗಾಂಧಿ ಅವರು ಈ ದೇಶವನ್ನು ಅರ್ಥ ಮಾಡಿಕೊಳ್ಳಲು ರೈಲಿನಲ್ಲಿ, ಕಾಲ್ನಡಿಗೆಯಲ್ಲಿ ದೇಶ ಸುತ್ತುತ್ತಾ ಜನ ಮಧ್ಯಕ್ಕೆ ಹೋದರು. ಶೂಟು-ಬೂಟು ಹಾಕಿಕೊಂಡು ಭಾರತಕ್ಕೆ ಬಂದಿದ್ದ ಗಾಂಧಿ, ಆ ಶೂಟು-ಬೂಟನ್ನು ಕಿತ್ತು ಹಾಕಿದ್ದು, ಅರೆಬೆತ್ತಲೆ ಪಕೀರನಾಗಿದ್ದು ಯಾತಕ್ಕೆ? ಜನ ಮಧ್ಯದೊಳಗೆ ಜನತಾ ಗಾಂಧಿ ಆಗಿದ್ದು ಹೇಗೆ? ಈ ಎಲ್ಲವನ್ನು ಅರ್ಥ ಮಾಡಿಕೊಂಡರೆ ಗಾಂಧೀಜಿಯ ಪ್ರಸ್ತುತತೆ ಏನು ಅನ್ನುವುದು ಅರ್ಥವಾಗುತ್ತದೆ ಎಂದು ಅವರು ತಿಳಿಸಿದರು.

ಗಾಂಧೀಜಿ ನಿಸರ್ಗ, ಮನುಷ್ಯನ ಬದುಕನ್ನು ಕುರಿತು ವಿವೇಕವನ್ನು ಇಟ್ಟುಕೊಂಡು ಮಾತನಾಡಿದ್ದಾರೆ ಹೊರತು, ಅವಿವೇಕದಲ್ಲಿ ಮಾತನಾಡಿಲ್ಲ. ಉಪಯುಕ್ತತೆ ಮನುಷ್ಯನಿಗೆ ಅನುಕೂಲವಾಗಬೇಕೇ ಹೊರತು, ಅನಾಹುತವಾಗಬಾರದು. ಈ ಎಚ್ಚರವನ್ನು ಯುವಕರು ಇಟುಕೊಳ್ಳಬೇಕು. ಜಾಗತಿಕವಾಗಿ ಇಷ್ಟೊಂದು ಕ್ರೌರ್ಯ ಯಾಕಿದೆ ಎನ್ನುವುದನ್ನು ಯೋಚಿಸಬೇಕು. ಗಾಂಧೀಜಿ ಹಿಂಸೆಯನ್ನು ಅಹಿಂಸೆಯಿಂದ ವಿರೋಧಿಸಿದರು. ಜಗತ್ತನ್ನು ಗೆಲ್ಲುವುದು ಅಹಿಂಸೆ, ಸತ್ಯಾಗ್ರಹ, ಸಹಿಷ್ಣುತೆಯಿಂದ, ಒಳಗೊಳ್ಳುವಿಕೆಯಿಂದ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಶೋಭಾ ಜಿ. ಮಾತನಾಡಿ, ಯುವಜನರಿಗೆ ಮಾಹಿತಿಯುಕ್ತ ಶಿಕ್ಷಣ ನೀಡಿದರೆ ಸಾಲದು, ಮೌಲ್ಯಾಧಾರಿತ ಶಿಕ್ಷಣ ನೀಡಬೇಕು. ಏನನ್ನಾದರೂ ಮಾಡುವ ಶಕ್ತಿ ಮತ್ತು ಛಲ ಇರುವ ಯುವಜನರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಗಾಂಧೀಜಿಯನ್ನು ಓದುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಅರ್ಥೈಸುವ ಮೂಲಕ ಪ್ರಜ್ಞೆ ಮೂಡಿಸಿಕೊಳ್ಳಬೇಕು. ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗಾಂಧಿ ಸ್ಮಾರಕನಿಧಿ ಪದಾಧಿಕಾರಿಗಳಾದ ಎಚ್.ಬಿ.ದಿನೇಶ್, ಜಿ.ಬಿ.ಶಿವರಾಜು, ಜಲಗಾಂವ್ ಗಾಂಧಿ ರೀಸರ್ಚ್ ಫೌಂಡೇಶನ್ ಪರೀಕ್ಷಾ ನಿಯಂತ್ರಣಾಧಿಕಾರಿ ಗಿರೀಶ್ ಕುಲಕರ್ಣಿ, ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್, ನಾಟಕಕಾರ ರಮೇಶ ಚಂದ್ರದತ್ತ, ಪತ್ರಕರ್ತ ಗೋ.ರಾ. ಶ್ರೀನಿವಾಸ, ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆ ರಾಜ್ಯ ಸಂಯೋಜಕಿ ಅಬಿದಾ ಬೇಗಂ ಸೇರಿದಂತೆ ಹಲರವು ಭಾಗವಹಿಸಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News