ಲೋಕಾಯುಕ್ತದಲ್ಲಿ ಸುಳ್ಳು ಪ್ರಕರಣ ದಾಖಲಿಸಿದರೆ 3 ವರ್ಷ ಜೈಲು : ನ್ಯಾ.ಬಿ.ವೀರಪ್ಪ
ಬೆಂಗಳೂರು : ಸುಳ್ಳು ಪ್ರಕರಣ ದಾಖಲಿಸುವವರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸುವ ವ್ಯವಸ್ಥೆಯನ್ನು ಲೋಕಾಯುಕ್ತದಲ್ಲಿ ಜಾರಿಗೆ ತರಲಾಗಿದೆ ಎಂದು ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಹೇಳಿದ್ದಾರೆ.
ಶನಿವಾರ ಗಾಂಧಿಭವನದಲ್ಲಿ ಗ್ರೇಟರ್ ಬೆಂಗಳೂರು ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ ಗ್ರೇಟರ್ ಬೆಂಗಳೂರು ಸಿಟಿಜಿನ್ ಫೋರಂ’ ಉದ್ಘಾಟಿಸಿ ಅವರು ಮಾತನಾಡಿದರು.
ಲೋಕಾಯುಕ್ತದಲ್ಲಿ ಅಂದಾಜು 40 ಸಾವಿರ ದೂರುಗಳು ಸಲ್ಲಿಕೆಯಾಗಿವೆ. ಅದರಲ್ಲಿ 10-20 ಸಾವಿರ ಸುಳ್ಳು ಪ್ರಕರಣಗಳಾಗಿವೆ. ಇದರಿಂದಾಗಿ ನೈಜ ದೂರುಗಳಿಗೆ ನ್ಯಾಯ ನೀಡುವ ಪ್ರಕ್ರಿಯೆ ತಡವಾಗುತ್ತಿದೆ. ಸುಳ್ಳು ಪ್ರಕರಣ ಹಾಕಿರುವುದು ಸಾಬೀತಾದರೆ ಜೈಲು ಶಿಕ್ಷೆ ವಿಧಿಸಬಹುದು. ನ್ಯಾಯಾಂಗ ಮತ್ತು ಪತ್ರಿಕಾ ರಂಗವು ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿವೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿಬರುತ್ತಿವೆ. ಕೆಲವೆಡೆ ಲೋಕಾಯುಕ್ತ ದಾಳಿ ನಡೆಸಿದ ಸಂದರ್ಭದಲ್ಲಿ ಬೆದರಿಕೆ ಹಾಕಿರುವ ಪ್ರಸಂಗಗಳಿವೆ. ಆದರೆ, ಯಾವ ಬೆದರಿಕೆಗಳಿಗೂ ನಾನು ಬಗ್ಗುವುದಿಲ್ಲ ಎಂದು ನ್ಯಾ.ಬಿ.ವೀರಪ್ಪ ತಿಳಿಸಿದರು.
ಅನ್ಯಾಯದ ಬಗ್ಗೆ ಯುವಕರು ಪ್ರಶ್ನಿಸುವಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಲಂಚಕೋರರನ್ನು ಸಿಡುಬು ರೋಗಿಗಳ ರೀತಿಯಲ್ಲಿ ದೂರ ಇಡಬೇಕು. ಹುದ್ದೆ ಘನತೆಗೆ ತಕ್ಕಂತೆ ಕಾರ್ಯನಿರ್ವಹಿಸುವ ಮೂಲಕ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುತ್ತಿದ್ದೇನೆ. ಉಪಲೋಕಾಯುಕ್ತ ಹುದ್ದೆ ಸ್ವೀಕರಿಸಿದ ಬಳಿಕ ನನ್ನ ಮೇಲೆ ಹಲವು ಸವಾಲುಗಳಿದ್ದವು. ಹಂತ ಹಂತವಾಗಿ ಭ್ರಷ್ಟಾಚಾರ ನಿರ್ಮೂಲನೆಗೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇನೆ. ಇಲಾಖೆಗಳಲ್ಲಿ ಭ್ರಷ್ಟಾಚಾರ ತಗ್ಗಬೇಕು. ಸರಕಾರಿ ಅಧಿಕಾರಿಗಳು ಸೇವಾ ಮನೋಭಾವನೆ ಬೆಳೆಸಿಕೊಂಡರೆ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ಸರಕಾರಿ ಸೌಲಭ್ಯ ಸಿಗಲಿದೆ ಎಂದು ಬಿ.ವೀರಪ್ಪ ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ಅಸೋಸಿಯೇಷನ್ ಉಪಾಧ್ಯಕ್ಷ ಪಿ.ಸೋಮಶೇಖರಯ್ಯ, ಪ್ರಧಾನ ಕಾರ್ಯದರ್ಶಿ ವಿ.ಎನ್. ಕುಮಾರ್ ಮತ್ತಿತರರಿದ್ದರು.