×
Ad

ಲೋಕಾಯುಕ್ತ ಎಡಿಜಿಪಿ, ತನಿಖಾಧಿಕಾರಿಗೆ ನ್ಯಾಯಾಲಯದ ಆದೇಶ ಪಾಲಿಸುವ ಉದ್ದೇಶವಿದ್ದಂತಿಲ್ಲ : ಜನಪ್ರತಿನಿಧಿಗಳ ಕೋರ್ಟ್ ಅಸಮಾಧಾನ

ಟಿ.ಡಿ.ರಾಜೇಗೌಡ ಕುಟುಂಬದ ವಿರುದ್ಧದ ಆದಾಯ ಮೀರಿದ ಆಸ್ತಿಗಳಿಕೆ ಪ್ರಕರಣ

Update: 2026-05-09 00:19 IST

ಸಾಂದರ್ಭಿಕ ಚಿತ್ರ | PC :  Image by freepik

ಬೆಂಗಳೂರು : ಶೃಂಗೇರಿ ಮಾಜಿ ಶಾಸಕ ಟಿ.ಡಿ.ರಾಜೇಗೌಡ ಕುಟುಂಬದ ವಿರುದ್ಧದ ಆದಾಯ ಮೀರಿದ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದ ಅಂತಿಮ ವರದಿ ಸಲ್ಲಿಸಲು ಯಾರ ಅನುಮತಿಗಾಗಿ ಕಾಯಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸದ ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ಹಾಗೂ ತನಿಖಾಧಿಕಾರಿಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಚಿಕ್ಕಮಗಳೂರಿನ ಕೊಪ್ಪ ನಿವಾಸಿ ಎಚ್‌.ಕೆ. ದಿನೇಶ್‌ ಸಲ್ಲಿಸಿದ ಖಾಸಗಿ ದೂರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ್‌ ಭಟ್‌ ಅವರು ಗುರುವಾರ (ಮೇ 7) ವಿಚಾರಣೆ ನಡೆಸಿದರು.

ಕಳೆದ ವಿಚಾರಣೆಯ ವೇಳೆ ನ್ಯಾಯಾಲಯ, ನಿಮ್ಮ ಮೇಲಿನ ಸೂಪರ್‌ ಕಾಪ್‌ (ಪೊಲೀಸ್‌ ಅಧಿಕಾರಿ) ಯಾರು? ಯಾವ ಕಾನೂನಿನ ಅಡಿ ಅಂತಿಮ ವರದಿ ಸಲ್ಲಿಸಲು ಅವರ ಅನುಮತಿಗೆ ಕಾಯುತ್ತಿದ್ದೀರಿ ಎಂಬ ಬಗ್ಗೆ ವಿವರಿಸಬೇಕು ಎಂದು ನಿರ್ದೇಶಿಸಿತ್ತು. ಗುರುವಾರ ಪ್ರಕರಣದ ವಿಚಾರಣೆ ವೇಳೆ ತನಿಖಾಧಿಕಾರಿ ನಂದಿನಿ ಅವರು ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಲಿಲ್ಲ.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಶೋಕಾಸ್‌ ನೋಟಿಸ್‌ ಜಾರಿ ಮಾಡಿ, ಲೋಕಾಯುಕ್ತ ಪೊಲೀಸರಿಂದ ವಿವರಣೆ ಬಯಸಿದರೂ ಅಂತಿಮ ವರದಿ ಸಲ್ಲಿಸಲು ಯಾರಿಂದ ಅನುಮತಿ ಪಡೆಯಬೇಕು ಎಂಬುದಕ್ಕೆ ಉತ್ತರಿಸಿಲ್ಲ. ಚಿಕ್ಕಮಗಳೂರಿನ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ತನಿಖಾಧಿಕಾರಿಯೂ ಆದ ಬಿ.ಎನ್‌. ನಂದಿನಿ ಮತ್ತು ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೆಶಕರು (ಎಡಿಜಿಪಿ) ನ್ಯಾಯಾಲಯದ ಆದೇಶ ಪಾಲಿಸುವ ಇರಾದೆ ಹೊಂದಿಲ್ಲ ಎಂದೆನಿಸುತ್ತದೆ. ನ್ಯಾಯದಾನದ ದೃಷ್ಟಿಯಿಂದ ಕೊನೆಯ ಅವಕಾಶ ನೀಡಲಾಗಿದೆ ಎಂದು ಆದೇಶದಲ್ಲಿ ದಾಖಲಿಸಿ, ವಿಚಾರಣೆಯನ್ನು ಮೇ 16ಕ್ಕೆ ಮುಂದೂಡಿತು.

ಪ್ರಕರಣವೇನು?

ಕಾಂಗ್ರೆಸ್‌ ಶಾಸಕ ರಾಜೇಗೌಡ, ಅವರ ಪತ್ನಿ ಡಿ.ಕೆ. ಹಾಗೂ ಪುತ್ರ ಟಿ.ಆರ್‌. ರಾಜದೇವ್‌ ಅವರು ಆದಾಯ ಮೀರಿ ಆಸ್ತಿ ಸಂಪಾದಿಸಿದ್ದಾರೆ. ಇದನ್ನು ಚುನಾವಣಾ ಪ್ರಮಾಣಪತ್ರದಲ್ಲಿ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಚಿಕ್ಕಮಗಳೂರಿನ ಕೊಪ್ಪ ನಿವಾಸಿ ಎಚ್‌.ಕೆ. ದಿನೇಶ್‌ ಅವರು ಖಾಸಗಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ 2025ರ ಜೂನ್‌ 6ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರ್ದೇಶಿಸಿತ್ತು.

ಕಳೆದ ಏಪ್ರಿಲ್‌ 21ರ ವಿಚಾರಣೆಯಂದು ತನಿಖಾಧಿಕಾರಿ ನಂದಿನಿ ಅವರು ಅಂತಿಮ ವರದಿ ಸಲ್ಲಿಸಲಾಗುವುದು ಎಂದಿದ್ದರು. ಅದರಂತೆ ಪ್ರಕರಣವನ್ನು ಮೇ 2ಕ್ಕೆ ಮುಂದೂಡಲಾಗಿತ್ತು. ಅಂದು ವಿಚಾರಣೆ ಆರಂಭವಾದಾಗ ನಂದಿನಿ ಅವರು ವರದಿಯನ್ನು ಕೇಂದ್ರ ಲೋಕಾಯುಕ್ತ ಕಚೇರಿಗೆ ಕಳುಹಿಸಿದ್ದು, ಅನುಮತಿಗಾಗಿ ಕಾಯುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ನ್ಯಾಯಾಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತಲ್ಲದೆ, ಯಾವ ಕಾನೂನಿನ ಅಡಿ ಮೇಲಧಿಕಾರಿಯಿಂದ ಅನುಮತಿ ಪಡೆಯಬೇಕು ಎಂಬುದನ್ನು ವಿವರಿಸುವಂತೆ ತಾಕೀತು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News