ಗ್ಯಾರಂಟಿಗಳನ್ನು ನಿಲ್ಲಿಸಲು ಸರಕಾರದ ಹುನ್ನಾರ : ಬಿ.ಶ್ರೀರಾಮುಲು
ಬೆಂಗಳೂರು : ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಇದೀಗ ಅದೇ ಆ ಯೋಜನೆಗಳ ಪರಿಷ್ಕರಣೆ ನೆಪದಲ್ಲಿ ಬಂದ್ ಮಾಡಲು ಹುನ್ನಾರ ನಡೆಸಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದ್ದಾರೆ.
ಶುಕ್ರವಾರ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಕೊಡಿ ಎಂದು ರಾಜ್ಯದ ಜನರು ಕೇಳಿರಲಿಲ್ಲ. ಅವರೇ ಸ್ವಾರ್ಥಕ್ಕಾಗಿ ಘೋಷಣೆ ಮಾಡಿದರು. ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕೊಡಿ ಎಂದು ಹೆಣ್ಣು ಮಕ್ಕಳು ಕೇಳಿರಲಿಲ್ಲ. ಆದರೂ ಸರಕಾರವೇ ಕೊಟ್ಟು ಇದೀಗ ಗ್ಯಾರಂಟಿಗಳನ್ನು ಸ್ಥಗಿತಗೊಳಿಸಲು ಮುಂದಾಗಿದ್ದಾರೆ ಎಂದು ದೂರಿದರು.
ಗೃಹಲಕ್ಷ್ಮಿ ಯೋಜನೆಯ ಹಣ ಮೃತ ಫಲಾನುಭವಿಗಳ ಖಾತೆಗೆ ಹೋಗುತ್ತಿದೆ ಎಂಬ ವರದಿಗಳಿವೆ. ಸರಕಾರದಲ್ಲಿ ಗ್ಯಾರಂಟಿ ಸಂಬಂಧ ಗೊಂದಲವಿದೆ. ಎಲ್ಲ ಕಡೆ ಲೋಪಗಳಾಗಿವೆ. ಗ್ಯಾರಂಟಿ ಯೋಜನೆಗಳು ಕಾಕಾ ಪಾಟೀಲ್ಗೂ ಉಚಿತ, ಸಿದ್ದರಾಮಯ್ಯರಿಗೂ ಉಚಿತ ಎಂದು ಹೇಳಿದ್ದರು. ಇದೀಗ ಸರಿಯಾಗಿ ಜಾರಿ ಮಾಡದೆ ನಿಲ್ಲಿಸಲು ಮುಂದಾಗಿದ್ದು, ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಶ್ರೀರಾಮುಲು ಆಗ್ರಹಿಸಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಚುನಾವಣಾ ಗ್ಯಾರಂಟಿ ಕೊಡಬೇಕಿತ್ತು, ಕೊಟ್ಟರು. ಈಗ ನಿಲ್ಲಿಸುವ ಷಡ್ಯಂತ್ರ ಮಾಡುತ್ತಿದ್ದಾರೆ. ಗೃಹಲಕ್ಷ್ಮಿ ಹಣದಲ್ಲಿ ಅಕ್ರಮ ನಡೆದಿದೆ ಎಂದು ಸದನದಲ್ಲೇ ಒಪ್ಪಿಕೊಂಡಿದ್ದರು. ಅಧಿಕಾರಕ್ಕಾಗಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ನಡುವೆ ಶೀತಲ ಸಮರ ನಡೆಯುತ್ತಿತ್ತು. ಈಗ ಶಿವಕುಮಾರ್ ಸಿಎಂ ಆದ ನಂತರ ಸಂಪುಟಕ್ಕಾಗಿ ಕಚ್ಚಾಟ ಆರಂಭವಾಯಿತು ಎಂದರು.
‘ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ’ ಎಂದು ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದರು. ಬಿಜೆಪಿ ನಾಯಕರು ‘ಧರ್ಮಸ್ಥಳ ಚಲೋ’ ಹೋರಾಟ ನಡೆಸಿದೆವು. ಇದೀಗ ನಟ ಪ್ರಕಾಶ್ ರಾಜ್ ಹೆಸರು ಕೇಳಿಬರುತ್ತಿದೆ. ನಮ್ಮ ಧಾರ್ಮಿಕ ಸ್ಥಳಕ್ಕೆ ತೊಂದರೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಅವರು ತಿಳಿಸಿದರು.