ವಿಜಯೇಂದ್ರ

ಬೆಂಗಳೂರು : ಕಬ್ಬು ಬೆಳೆಗಾರರ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಪಟ ನಾಟಕ ಆಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಬ್ಬು ಬೆಳೆಗಾರರನ್ನು ಭೇಟಿ ಮಾಡಿ ಇದೆಲ್ಲವೂ ಕೇಂದ್ರ ಸರಕಾರದ ಜವಾಬ್ದಾರಿ; ರಾಜ್ಯ ಸರಕಾರದ ಹೊಣೆ ಏನೂ ಇಲ್ಲ ಎಂಬಂತೆ ವರ್ತಿಸಿದ್ದಾರೆ. ಸಕ್ಕರೆ ಕಾರ್ಖಾನೆಗಳಿಂದ ರಾಜ್ಯ ಸರಕಾರಕ್ಕೆ ಅತಿ ಹೆಚ್ಚು ಅನುಕೂಲ ಆಗುತ್ತಿದೆ ಎಂಬುದನ್ನು ಕಬ್ಬು ಬೆಳೆಗಾರರು ಅರ್ಥ ಮಾಡಿಕೊಳ್ಳಬೇಕು. ಕಬ್ಬು ಬೆಳೆಗಾರರ ಪರಿಶ್ರಮದಿಂದ ಸಾವಿರಾರು ಕೋಟಿ ಆದಾಯ ರಾಜ್ಯ ಸರಕಾರಕ್ಕೆ ಬರುತ್ತಿದೆ. ಹರ್ಯಾಣ, ಬಿಹಾರ ಇತರ ರಾಜ್ಯಗಳು ಬೆಂಬಲ ಬೆಲೆ ನೀಡುತ್ತಿವೆ. ಕರ್ನಾಟಕ ಸರಕಾರವೂ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ಕೊಡಬೇಕು ಎಂದು ಆಗ್ರಹಿಸಿದರು.

ನರೇಂದ್ರ ಮೋದಿಯವರ ಸರಕಾರವು ಎಥೆನಾಲ್ ಉತ್ಪಾದನೆ ಮೊದಲಾದವುಗಳಿಂದ ಮೌಲ್ಯವರ್ಧನೆ ಮಾಡಿದೆ. ಇದರಿಂದ ರಾಜ್ಯದ ಆದಾಯ ಹೆಚ್ಚಾಗಿದೆ. ಆದರೆ, ರಾಜ್ಯ ಸರಕಾರವು ಕಬ್ಬು ಬೆಳೆಗಾರರ ರಕ್ಷಣೆಗೆ ಬರುತ್ತಿಲ್ಲ ಎಂದು ಟೀಕಿಸಿದರು. ಮುಖ್ಯಮಂತ್ರಿಯವರು ರಾಜಕಾರಣ ಮಾಡುವುದನ್ನು ಬಿಟ್ಟು ರಾಜ್ಯ ಸರಕಾರದ ಜವಾಬ್ದಾರಿ ನಿರ್ವಹಿಸಬೇಕೆಂದು ಒತ್ತಾಯಿಸಿದರು.

ಪಾರದರ್ಶಕ ತನಿಖೆ ಮಾಡಬೇಕು :

ಸ್ಟಿಂಗ್ ಆಪರೇಷನ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದ ಒಬ್ಬ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆದಿದೆ. ನನ್ನ ಮೇಲೆ ಷಡ್ಯಂತ್ರ ಎಂದು ಸಿದ್ದರಾಮಯ್ಯನವರು ಹೇಳಿದರೂ ಕೂಡ ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮುಖ್ಯಮಂತ್ರಿ, ಗೃಹ ಸಚಿವರು ಈಗಲಾದರೂ ಎಚ್ಚತ್ತುಕೊಂಡು ಪಾರದರ್ಶಕ ತನಿಖೆ ಮಾಡಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor