ನಾರಾಯಣಗೌಡ

ಬೆಂಗಳೂರು : ‘ಕರ್ನಾಟಕ ಕಂಡ ಮಹಾ ಮಾನವತಾವಾದಿ, ದಾರ್ಶನಿಕ, ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರನ್ನು ಕೀಳಾಗಿ ನಿಂದಿಸಿದ್ದ ರವಿ ಹಂಜ್ ಎಂಬಾತನನ್ನು ಪೊಲೀಸರು ಬಂಧಿಸಿರುವುದು ಸ್ವಾಗತಾರ್ಹ. ಈತ ಮಾಡಿರುವುದು ಭಯೋತ್ಪಾದನೆಗೆ ಸಮನಾದ ಕೃತ್ಯ. ಹೀಗಾಗಿ ಈತನ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.

ಶನಿವಾರ ಪ್ರಕಟಣೆ ನೀಡಿರುವ ಅವರು, ‘ಕೃತಿಯ ಲೇಖಕ ರವಿ ಹಂಜ್ ರೀತಿಯ ಸಾಂಸ್ಕೃತಿಕ ಭಯೋತ್ಪಾದಕರು ಆಗಾಗ ಸಮಾಜದ ಸ್ವಾಸ್ತ್ಯವನ್ನು ಹಾಳುಗೆಡವುತ್ತಾರೆ. ಇಂತಹವರು ಸಮಾಜಕ್ಕೆ ಅಂಟಿದ ಕಳಂಕಗಳು. ನೆಮ್ಮದಿಯ ನಾಡಿನಲ್ಲಿ ಸಮುದಾಯಗಳ ನಡುವೆ ಸಂಘರ್ಷ ಹುಟ್ಟು ಹಾಕುವ ಇಂತಹ ರೋಗಿಷ್ಟ ಮನಸ್ಸಿನವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕರ್ನಾಟಕದ ಚೇತನಗಳಿಗೆ ಕೆಸರು ಎರಚುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ಇಡೀ ಕನ್ನಡ ಸಮುದಾಯಕ್ಕೆ ನೈತಿಕ ನಡಾವಳಿಯ ಸೂತ್ರವನ್ನೇ ರೂಪಿಸಿಕೊಟ್ಟ, ಜಗತ್ತಿಗೆ ವಿಶ್ವ ಮಾನವತೆಯ ತತ್ವವನ್ನು ಕೊಟ್ಟ ಬಸವಣ್ಣವರನ್ನು ‘ಕೊಲೆಗಾರ, ಕಳ್ಳ’ ಎಂದು ನಿಂದಿಸುವವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ. ಜಗತ್ತಿನ ಶ್ರೇಷ್ಠ ಪರಂಪರೆಗಳಲ್ಲಿ ಒಂದಾದ ಲಿಂಗಾಯತವನ್ನು ‘ಲಿಂಗಾಹತ’ ಎಂದು ಕರೆಯುವುದು ಈತನ ಹೀನಾಯ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

‘ಬಸವಣ್ಣನವರು ನಮ್ಮ ಹೆಮ್ಮೆ. ನಿಸ್ಸಂಶಯವಾಗಿ ಅವರು ಕರ್ನಾಟಕದ ಸಾಂಸ್ಕೃತಿಕ ನಾಯಕ. ಅವರು ನಡೆಸಿದ ಸಾಮಾಜಿಕ ಕ್ರಾಂತಿ ನಮಗೆ ಸ್ಫೂರ್ತಿ. ಕರ್ನಾಟಕದ ಸಾಮಾಜಿಕ ಬದುಕನ್ನು ಬದಲಿಸಿ, ಸಮಾನತೆಯ ಬೀಜ ಬಿತ್ತಿದ ಬಸವಣ್ಣನವರನ್ನು ದ್ವೇಷಿಸುವ ಜಾತಿವಾದಿಗಳು, ಯಥಾಸ್ಥಿತಿವಾದಿಗಳು 12ನೇ ಶತಮಾನದಲ್ಲೂ ಇದ್ದರು, ಈ ಆಧುನಿಕ ಕಾಲದಲ್ಲೂ ಇದ್ದಾರೆ. ಈ ಕ್ಷುದ್ರ ಜೀವಿಗಳು ಬಸವಣ್ಣನವರು ಪ್ರತಿಪಾದಿಸಿದ ತತ್ವಗಳ ವಿರೋಧಿಗಳು. ಇವರ ಮಾತುಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವವರೂ ಸಮಾಜ ದ್ರೋಹಿಗಳು’ ಎಂದು ಅವರು ಎಚ್ಚರಿಸಿದ್ದಾರೆ.

‘ಪೊಲೀಸರು ಮುಲಾಜಿಲ್ಲದೆ ಈ ನಿಕೃಷ್ಟ ಹುಳವನ್ನು ಜೈಲಿಗೆ ಕಳುಹಿಸಬೇಕು. ಈತನ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಈತನ ಬೆನ್ನ ಹಿಂದೆ ನಿಂತು ಕುಮ್ಮಕ್ಕು ಕೊಟ್ಟ ಮುಖೇಡಿಗಳನ್ನೂ ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕು ಎಂದು ನಾರಾಯಣಗೌಡ ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಪ್ರಕಾಶ್ ಸಿ. ರಾಮಜೋಗಿಹಳ್ಳಿ/ವಾರ್ತಾಭಾರತಿ

contributor