'ಬಸವ ಮಂಟಪ' ಕೃತಿ ವಿವಾದ: ಲೇಖಕ ರವಿ ಹಂಜ್ ಕೊಚ್ಚಿಯಲ್ಲಿ ವಶಕ್ಕೆ
ಬೆಂಗಳೂರು: ಬಸವಣ್ಣನ ವಿಚಾರ ಹಾಗೂ ಲಿಂಗಾಯತ ಸಮುದಾಯಕ್ಕೆ ನೋವುಂಟು ಮಾಡಿರುವ ಆರೋಪದಡಿ ದಾಖಲಾಗಿರುವ ಮೊಕದ್ದಮೆಗೆ ಸಂಬಂಧಿಸಿ ವಿವಾದಿತ 'ಬಸವ ಮಂಟಪ' ಕೃತಿಯ ಲೇಖಕ ರವಿ ಹಂಜ್ ರನ್ನು ಕೇರಳಂನ ಕೊಚ್ಚಿ ಏರ್ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಬಸವಣ್ಣರಿಗೆ ಅಪಮಾನ ವಿಚಾರವಾಗಿ ರವಿ ಹಂಜ್ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲೂ ಎಫ್ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು.
ಎಫ್ಐಆರ್ ದಾಖಲಾದ ಬಳಿಕ ರವಿ ಹಂಜ್ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಅವರ ಅಧಿಕೃತ ನಿವಾಸಕ್ಕೆ ಪೊಲೀಸರು ನೋಟಿಸ್ ಜಾರಿ ಮಾಡಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ರವಿ ಹಂಜ್ ದೇಶ ತೊರೆಯುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿತ್ತು.
ಇಂದು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ಪತ್ತೆಯಾಗಿದ್ದು, ಏರ್ ಪೋರ್ಟ್ ಪೊಲೀಸರು ಅವರನ್ನು ವಶಕ್ಕೆ ಪಡೆದು ಬೆಳಗಾವಿ ಮಾರ್ಕೆಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಬೆಳಗಾವಿ ಮಾರ್ಕೆಟ್ ಪೊಲೀಸರು ರವಿ ಹಂಜ್ ರನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
‘ಬಸವ ಮಂಟಪ’ ಕೃತಿಯಲ್ಲಿ ಜಗಜ್ಯೋತಿ ಬಸವಣ್ಣನವರನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪಗಳ ಬೆನ್ನಲ್ಲೇ ಕೃತಿಯನ್ನು ಮುಟ್ಟುಗೋಲು ಹಾಕಲು ಕರ್ನಾಟಕ ಸಚಿವ ಸಂಪುಟ ಗುರುವಾರ ನಿರ್ಧರಿಸಿದೆ. ಈ ಕೃತಿಯ ಲೇಖಕ ರವಿ ಹಂಜ್, ಕೃತಿ ಪ್ರಕಟಿಸಿದ ಪ್ರಕಾಶನದ ಮಾಲಕ, ಪತ್ರಕರ್ತ ವಿಶ್ವೇಶ್ವರ್ ಭಟ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ನಡುವೆ ಬಸವೇಶ್ವರರಿಗೆ ಅಪಮಾನ ಮಾಡಿದರೂ ಸಹಿಸಲಾಗದು. ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದರು. ಅದೆಲ್ಲದರ ಬೆನ್ನಲ್ಲೇ ಇದೀಗ ರವಿ ಹಂಜ್ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.