Bengaluru | ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಸೃಷ್ಟಿ: ವಿದ್ಯಾರ್ಥಿಗಳಿಗೆ ಮಾರಾಟ; ಓರ್ವನ ಬಂಧನ, ಮತ್ತೊಬ್ಬನಿಗಾಗಿ ಶೋಧ
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಆಮಿಷವೊಡ್ಡಿ ಹಣ ಪಡೆದು ನಕಲಿ ಅಂಕಪಟ್ಟಿಗಳನ್ನು ಸೃಷ್ಟಿಸಿ ಮಾರುತ್ತಿದ್ದ ಜಾಲವೊಂದನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಕೋರಮಂಗಲದ ಡಿಜಿಟಲ್ ಡಿಸ್ಟೆನ್ಸ್ ಎಜುಕೇಷನ್ ಮಿಷನ್ ಸಂಸ್ಥೆಯ ಮಾಲಕ ರಾಜಾರೆಡ್ಡಿ(53) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ದುಷ್ಕೃತ್ಯದಲ್ಲಿ ತೊಡಗಿದ್ದ ಮತ್ತೋರ್ವ ಆರೋಪಿ ಆರ್ಯನ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಡಿಜಿಟಲ್ ಡಿಸ್ಟೆನ್ಸ್ ಎಜುಕೇಷನ್ ಹೆಸರಿನಲ್ಲಿ ವಿದ್ಯಾರ್ಥಿಗಳ ಮೊಬೈಲ್ ನಂಬರ್ ಸಂಗ್ರಹಿಸಿ ಸಂಸ್ಥೆಯ ಉದ್ಯೋಗಿಗಳಿಂದ ಕರೆ ಮಾಡಿಸಿ ನಗರದ ವಿವಿಧ ಕಾಲೇಜುಗಳಲ್ಲಿ ಪ್ರವೇಶಾತಿ ಕೊಡಿಸುವುದಾಗಿ ಆರೋಪಿಗಳು ನಂಬಿಸುತ್ತಿದ್ದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವ್ಯಾಸಂಗ ಮಾಡದಿದ್ದರೂ ಪದವಿ ಕಾಲೇಜಿಗೆ ಪ್ರವೇಶಾತಿ ಕೊಡಿಸುವುದಾಗಿ ಭರವಸೆ ನೀಡುತ್ತಿದ್ದರು. ಇದನ್ನು ನಂಬಿದ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಅಂಕಪಟ್ಟಿ ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು. ಇದೇ ರೀತಿಯಲ್ಲಿ ಲಕ್ಷಾಂತರ ರೂಪಾಯಿ ಅಕ್ರಮವಾಗಿ ಹಣ ಸಂಪಾದನೆ ಮಾಡಿರುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿಗಳ ಅಕ್ರಮ ಜಾಲದ ಬಗ್ಗೆ ಮಾಹಿತಿ ಆಧರಿಸಿ ಸಿಸಿಬಿ ವಿಶೇಷ ತನಿಖಾ ದಳ ದಾಳಿ ನಡೆಸಿತ್ತು. ಸದ್ಯ, ಆರೋಪಿ ರಾಜಾರೆಡ್ಡಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.