×
Ad

ಷರತ್ತು ಹಾಕಿ ʼಗ್ಯಾರಂಟಿʼ ಬಾಗಿಲು ಮುಚ್ಚುತ್ತಿರುವ ಸರಕಾರ : ವಿಜಯೇಂದ್ರ

Update: 2026-06-11 19:39 IST

ಬೆಂಗಳೂರು : ಚುನಾವಣೆ ಸಮಯದಲ್ಲಿ ಎಲ್ಲ ಮಹಿಳೆಯರಿಗೂ ಗೃಹಲಕ್ಷ್ಮಿ ಗ್ಯಾರಂಟಿ ಎಂದು ಭರವಸೆ ಕೊಟ್ಟ ಕಾಂಗ್ರೆಸ್ ಪಕ್ಷ, ಅಧಿಕಾರಕ್ಕೆ ಬಂದ ತಕ್ಷಣ ತನ್ನ ಆಟ ಆರಂಭಿಸಿತು. ಒಂದೊಂದೇ ಷರತ್ತು ಹಾಕಿ, ಒಂದೊಂದೇ ಬಾಗಿಲು ಮುಚ್ಚಿ, ಇಂದು 17 ಜಿಲ್ಲೆಗಳಲ್ಲಿ 1.12 ಲಕ್ಷ ಮಹಿಳೆಯರನ್ನು ಗೃಹಲಕ್ಷ್ಮಿ ಪಟ್ಟಿಯಿಂದ ಕೈಬಿಡುವವರೆಗೆ ಬಂದು ನಿಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಗುರುವಾರ ಈ ಸಂಬಂಧ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ಇಷ್ಟು ಸಾಲದು ಎಂಬಂತೆ, ಈಗ 2 ಸಾವಿರ ರೂ. ಬೇಕಿದ್ದರೆ 5 ರೂ. ಶುಲ್ಕ ತೆತ್ತು ಬಯೋಮೆಟ್ರಿಕ್ ಮಾಡಿಸಿಕೊಳ್ಳಬೇಕು ಎಂದು ಹೊಸ ಷರತ್ತು ಹಾಕಿದೆಯಂತೆ ಈ ಭ್ರಷ್ಟ ಕಾಂಗ್ರೆಸ್ ಸರಕಾರ. ಮತ ಕೇಳುವಾಗ ನುಡಿದಿದ್ದೇನು? ಈಗ ನಡೆಯುತ್ತಿರುವುದು ಹೇಗೆ? ಹೇಗಾದರೂ ಮಾಡಿ ಆದಷ್ಟು ಮಹಿಳೆಯರನ್ನು ಯೋಜನೆಯಿಂದ ಹೊರಗಿಡಬೇಕು ಎನ್ನುವುದಷ್ಟೇ ಈ ಕಾಂಗ್ರೆಸ್ ಸರಕಾರದ ಉದ್ದೇಶ ಎಂದು ದೂರಿದ್ದಾರೆ.

ಇದಕ್ಕಿಂತ ನಾಚಿಕೆಗೇಡಿನ ಸಂಗತಿಯೆಂದರೆ, 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ 5,000 ಕೋಟಿ ರೂ.ಗಳ ಕಂತು 1.26 ಕೋಟಿ ಮಹಿಳೆಯರಿಗೆ ಇನ್ನೂ ತಲುಪಿಲ್ಲ. ಇದನ್ನು ಸ್ವತಃ ಈ ಕಾಂಗ್ರೆಸ್ ಸರಕಾರದ ಸಚಿವರೆ ವಿಧಾನಸಭೆಯಲ್ಲೆ ಒಪ್ಪಿಕೊಂಡಿದ್ದಾರೆ. ಈ 5,000 ಕೋಟಿ ರೂ. ಎಲ್ಲಿ ಹೋಯಿತು ಎಂಬ ಪ್ರಶ್ನೆಗೆ ಇಂದಿಗೂ ಈ ಕಾಂಗ್ರೆಸ್ ಸರಕಾರ ಉತ್ತರಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಹೈಕೋರ್ಟ್‍ನಲ್ಲಿ ಪಿಐಎಲ್ ಹೂಡಿದ ನಂತರವೂ ಕಾಂಗ್ರೆಸ್ ಸರಕಾರ ಉತ್ತರ ಕೊಟ್ಟಿಲ್ಲ. ಹಳೆಯ ಬಾಕಿ ಕೊಡದೆ ಈಗ ರಾಜ್ಯದ ನಮ್ಮ ತಾಯಂದಿರು ಮತ್ತು ಸೋದರಿಯರಿಗೆ, ನೀವು ಅರ್ಹರು ಎನ್ನುವುದಕ್ಕೆ ಸರ್ಟಿಫಿಕೇಟ್ ತನ್ನಿ ಎನ್ನುವಷ್ಟರ ಮಟ್ಟಿಗೆ ದಾಷ್ಟ್ರ್ಯ ಮೆರೆಯುತ್ತಿದೆ ಈ ಕಾಂಗ್ರೆಸ್ ಸರಕಾರ ಎಂದು ವಿಜಯೇಂದ್ರ ದೂರಿದ್ದಾರೆ.

ಕೇವಲ ಚುನಾವಣೆಯಲ್ಲಿ ಮತ ಪಡಿಯಲು ಮನಸ್ಸಿಗೆ ಬಂದಂತೆ ಗ್ಯಾರಂಟಿ ನೀಡಿ, ಅಧಿಕಾರಕ್ಕೆ ಬಂದ ಮೇಲೆ ವಂಚಿಸುತ್ತಿರುವ ಈ ಭ್ರಷ್ಟ, ಅನೈತಿಕ ಕಾಂಗ್ರೆಸ್ ಸರಕಾರಕ್ಕೆ ರಾಜ್ಯದ ಮಹಿಳೆಯರೆ ಸ್ಪಷ್ಟ ಸಂದೇಶ ನೀಡಲಿದ್ದಾರೆ. ಮೊದಲು 5,000 ಕೋಟಿ ರೂ. ಲೆಕ್ಕ ಚುಕ್ತಾ ಮಾಡಿ, ಸುಮ್ಮನೆ ಹೆಚ್ಚು ಹೆಚ್ಚು ಮಹಿಳೆಯರನ್ನು ಹೊರಗಿಡಲು ಷರತ್ತುಗಳನ್ನು ರೂಪಿಸುತ್ತಾ ಕೂರಬೇಡಿ ಎಂದು ಅವರು ಆಗ್ರಹಿಸಿದ್ದಾರೆ.

ಬಾಕಿ ಕಂತು ತಕ್ಷಣ ಬಿಡುಗಡೆ ಮಾಡಿ ಎನ್ನುವುದು ರಾಜ್ಯದ ಎಲ್ಲ ತಾಯಂದಿರ ಮತ್ತು ಸೋದರಿಯರ ಆಗ್ರಹವಾಗಿದೆ. ಗ್ಯಾರಂಟಿ ಕೊಟ್ಟವರು ನೀವು-ಈಗ ಅದರ ಹೊಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ಸರಕಾರ ರಾಜ್ಯದ ಮಹಿಳೆಯರಿಗೆ ಉತ್ತರ ಕೊಡಲೇಬೇಕು ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News