Bengaluru | ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2026-08-22 19:46 IST

ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿನಿತ್ಯ ಆಧಾರ ರಹಿತ ಆರೋಪ ಮಾಡುತ್ತಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು, ಇಲ್ಲಿನ ಕಾಂಗ್ರೆಸ್ ಭವನದ ಬಳಿ ಅಣಕು ಪ್ರತಿಭಟನೆ ನಡೆಸಿ ವಾಗ್ದಾಳಿ ನಡೆಸಿದರು.

ಶನಿವಾರ ಇಲ್ಲಿನ ಆನಂದ ರಾವ್ ವೃತ್ತದಲ್ಲಿನ ಕಾಂಗ್ರೆಸ್ ಭವನದ ಬಳಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಹೊಟ್ಟೆ ಉರಿ ಔಷಧವೊಂದನ್ನು ಕುಮಾರಸ್ವಾಮಿ ವಿಳಾಸಕ್ಕೆ ಕೋರಿಯರ್ ಮೂಲಕ ರವಾನೆ ಮಾಡಿದರು. ಅಲ್ಲದೆ ಎಚ್‍ಡಿಕೆ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಎಸ್.ಮನೋಹರ್, ‘ಬಿಜೆಪಿ ಆಡಳಿತದ ಅವಧಿಯಲ್ಲಿ ಕೇಳಿಬಂದಿರುವ ಬಗರ್ ಹುಕುಂ, ಆರ್‍ಟಿಜಿಎಸ್ ಮೂಲಕ ಲಂಚ, ಹೌಸಿಂಗ್ ಬೋರ್ಡ್ ಅಕ್ರಮಗಳು, ಕೋವಿಡ್ ಸಂದರ್ಭದಲ್ಲಿ ಶೇ.40ರಷ್ಟು ಕಮಿಷನ್ ಹಾಗೂ ಹಾಸಿಗೆ ಬ್ಲಾಕಿಂಗ್ ಸೇರಿದಂತೆ ವಿವಿಧ ಭ್ರಷ್ಟಾಚಾರ ಮತ್ತು ಅಕ್ರಮಗಳ ಆರೋಪಗಳ ಬಗ್ಗೆ ಬಿಜೆಪಿ ನಾಯಕರು ಏಕೆ ಮಾತನಾಡುವುದಿಲ್ಲ’ ಎಂದು ಪ್ರಶ್ನಿಸಿದರು.

ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಹಣದಲ್ಲಿ ಎಷ್ಟು ಹಣ ಪಿಎಂ ಕೇರ್ಸ್ ನಿಧಿಗೆ ಅಥವಾ ಬಿಜೆಪಿ ಕೇಂದ್ರ ಕಚೇರಿಗೆ ತಲುಪಿದೆ? ಎಂಬುದರ ಕುರಿತು ಉತ್ತರಿಸಬೇಕು. ಕಾಂಗ್ರೆಸ್ ಸರಕಾರ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿ, ಅಭಿವೃದ್ಧಿಗೆ ಒತ್ತು ನೀಡುವ ಸಂದರ್ಭದಲ್ಲಿ ಆಧಾರವಿಲ್ಲದೆ ರಾಜ್ಯ ಸರಕಾರದ ವಿರುದ್ಧ ಆರೋಪ ಮಾಡುತ್ತಿರುವುದು ರಾಜಕೀಯ ಅಸೂಯೆಯ ಪ್ರತೀಕವಾಗಿದೆ ಎಂದು ಅವರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಆನಂದ್ ಕುಮಾರ್ ಎಂ.ಎಸ್., ಪ್ರಕಾಶ್, ಪುಟ್ಟರಾಜು, ಲಕ್ಷ್ಮೀ ನಾರಾಯಣ, ನವೀನ್, ಒಬಳೇಶ್, ಪವನ್ ಸೇರಿದಂತೆ ಹಲವು ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News