ಆಹಾರ ಇಲಾಖೆಯಲ್ಲಿ 6 ತಿಂಗಳಲ್ಲಿ ಹೊಸ ಬದಲಾವಣೆ : ಸಚಿವ ರಿಝ್ವಾನ್ ಅರ್ಶದ್

Update: 2026-08-21 22:16 IST

ಬೆಂಗಳೂರು : ಆಹಾರ ನಿಗಮವು ಬಡವರ ಆಹಾರಕ್ಕೆ ಸಂಬಂಧಿಸಿದಂತಹ ನಿಗಮ. ಈ ಇಲಾಖೆಯಲ್ಲಿ ಹೊಸ ಬದಲಾವಣೆಗೆ ಬದ್ದವಾಗಿದ್ದು, ಮುಂದಿನ 6 ತಿಂಗಳಲ್ಲಿ ಹೊಸ ರೂಪ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಝ್ವಾನ್ ಅರ್ಶದ್ ಹೇಳಿದರು.

ಶುಕ್ರವಾರ ನಗರದ ಇನ್‍ಫೆಂಟ್ರಿ ರಸ್ತೆಯಲ್ಲಿರುವ ಕೆಎಎಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ನೂತನವಾಗಿ ನೇಮಕಗೊಂಡಿರುವ ಪ್ರಶಿಕ್ಷಣಾರ್ಥಿಗಳಿಗೆ ಶುಭಕೋರಿ ಅವರು ಮಾತನಾಡಿದರು.

ನೀವು ಹೊಸದಾಗಿ ಆಯ್ಕೆ ಆಗಿದ್ದೀರಿ. ನಿಮ್ಮ ಹಾಗೇ ನಾನು ಹೊಸದಾಗಿಯೇ ಸಚಿನಾಗಿದ್ದೇನೆ. ಇಲಾಖೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ತರುವ ಉದ್ದೇಶದಿಂದಲೇ ಈ ಜವಾಬ್ದಾರಿ ಒಪ್ಕೊಂ ಡಿರೋದು. ಹೊಸ ಬದಲಾವಣೆ ತರಬೇಕಾದರೆ ಹೊಸಬರು ಬರಬೇಕಾಗುತ್ತದೆ ಎಂದು ಅವರು ಹೇಳಿದರು.

ಬಡವರ ಆಹಾರಕ್ಕೆ ಸಂಬಂಧಿಸಿದ ಇಲಾಖೆ ಇದಾಗಿದೆ. ನೇರವಾಗಿ ಬಡವರೊಂದಿಗೆ ಕೆಲಸ ಮಾಡುವ ಸಂಸ್ಥೆಗೆ ನೀವು ಆಯ್ಕೆ ಆಗಿದ್ದೀರಿ. ಇತರೆ ಸರಕಾರಿ ನೌಕರರಿಗಿಂತ 10 ಪಟ್ಟು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ ಎಂದು ರಿಝ್ವಾನ್ ಅರ್ಶದ್ ಕರೆ ನೀಡಿದರು.

ಇಲಾಖೆಯ ಗೋದಾಮುಗಳಲ್ಲಿ ಸಿಸಿಟಿವಿಗಳಿಲ್ಲ, ಆಹಾರ ಸಾಮಾಗ್ರಿಗಳ ಸರಬರಾಜು ಮಾಡುವ ವಾಹನಗಳಿಗೆ ಜಿಪಿಎಸ್ ಇಲ್ಲ. ಅವೆಲ್ಲದರ ಸುಧಾರಣೆ ಮಾಡಲಾಗುತ್ತದೆ. ನಾವು ನೀವು ಎಲ್ಲರೂ ಸೇರಿ ಕೆಲಸ ಮಾಡಬೇಕು. ಜನರಿಗೆ ಕಾಣಿಸುವ ರೀತಿಯಲ್ಲಿ ಬದಲಾವಣೆ ತರಬೇಕು. ಆ ನಿಟ್ಟಿನಲ್ಲೇ ನೀವು ಕೆಲಸ ಮಾಡಬೇಕು. ನಮ್ಮ ಉದ್ದೇಶ ಸರಿಯಾಗಿದ್ದರೆ ಇಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ಅವರು ಹೇಳಿದರು.

ಮಧ್ಯಾಹ್ನದ ಬಿಸಿಯೂಟದ ಯೋಜನೆ ನಮ್ಮಿಂದ ತೆಗೆದ್ದದ್ದು ಯಾಕೆ. ನಾವು ಸರಿಯಿದ್ದಿದ್ದರೆ ಯಾಕೆ ತೇಗೆಯುತ್ತಿದ್ದರು. ನಾವು ಸರಿಮಾಡ್ತೇವೆ ಎಂಬ ವಿಶ್ವಾಸ ಕೊಟ್ಟರೆ ಬೇಕಾದಷ್ಟು ಯೋಜನೆಗಳು ಬರುತ್ತವೆ. ಬಿಸಿಯೂಟದ ಯೋಜನೆ ಇಲಾಖೆಗೆ ವಾಪಸ್ ತರಲು ಪ್ರಯತ್ನ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕ 386 ಹುದ್ದೆಗಳಿಗೆ ಆಯ್ಕೆ ನಡೆದಿದ್ದು, ಜು.17 ರಂದು ನೇಮಕ ಪತ್ರ ನೀಡಲಾಗಿದೆ. 191 ಅಭ್ಯರ್ಥಿಗಳು ವರದಿ ಮಾಡಿಕೊಂಡಿದ್ದಾರೆ. ಹೊಸದಾಗಿ ಆಯ್ಕೆಗೊಂಡಿರುವ ಪ್ರಶಿಕ್ಷಣಾರ್ಥಿಗಳಿಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News