Bengaluru | ಎಸ್‍ಐಆರ್ ರದ್ದತಿಗೆ ಆಗ್ರಹಿಸಿ ಸಿಜೆಪಿ-ಜಾಗೃತ ಕರ್ನಾಟಕ ಪ್ರತಿಭಟನೆ
ಬೆಂಗಳೂರು : ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರನ್ನು ವಜಾಗೊಳಿಸಬೇಕು ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಮಂಗಳವಾರ ನಗರದ ಫ್ರೀಡಂಪಾರ್ಕ್‍ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮತ್ತು ಜಾಗೃತ ಕರ್ನಾಟಕ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಜೆಪಿ ಮುಖಂಡ ರಾಹುಲ್, ದಿಲ್ಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿ ಯುವಜನರ ಮೇಲೆ ಆರೆಸ್ಸೆಸ್, ಬಿಜೆಪಿ ಗೂಂಡಾಗಳು ಹಲ್ಲೆ ನಡೆಸುತ್ತಿರುವುದು ಖಂಡನೀಯ. ಗೃಹ ಇಲಾಖೆ ಅವರ ವಿರುದ್ಧ ಕೂಡಲೇ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸುವ ಹಕ್ಕನ್ನು ಯಾವುದೇ ಸರಕಾರ ಗೌರವಿಸಬೇಕು. ತಮ್ಮ ಬೇಡಿಕೆಗಳಿಗೆ ಧ್ವನಿ ಎತ್ತುವ ಹೋರಾಟಗಾರರ ಮೇಲೆ ಹಲ್ಲೆ ನಡೆಸುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಎಸ್‍ಐಆರ್ ಪ್ರಕ್ರಿಯೆಯಿಂದ ಅರ್ಹ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಮತದಾರರ ಪಟ್ಟಿಯ ಪರಿಷ್ಕರಣೆಯ ಸಂದರ್ಭದಲ್ಲಿ ಯಾವುದೇ ಅರ್ಹ ನಾಗರಿಕರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಮಹತ್ವದ್ದಾಗಿದ್ದು, ಮತದಾರರ ಪಟ್ಟಿಯ ಪರಿಷ್ಕರಣೆ ನ್ಯಾಯಸಮ್ಮತವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು ಎಂದು ರಾಹುಲ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವಜನರು, ಹೋರಾಟಗಾರರು, ಜ್ಞಾನೇಶ್ ಕುಮಾರ್ ರನ್ನು ವಜಾಗೊಳಿಸಬೇಕು, ಎಸ್‍ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಘೋಷಣೆಗಳನ್ನು ಕೂಗಿದರು. ಮತದಾರರ ಹಕ್ಕುಗಳ ರಕ್ಷಣೆ, ಮತದಾರರ ಪಟ್ಟಿಯಲ್ಲಿನ ಹೆಸರುಗಳ ಅಳಿಸುವಿಕೆಯಿಂದ ಉಂಟಾಗಬಹುದಾದ ಸಮಸ್ಯೆಗಳು ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವ ಅಗತ್ಯದ ಕುರಿತು ಪ್ರತಿಭಟನಾಕಾರರು ಗಮನ ಸೆಳೆದರು.
ಪ್ರತಿಭಟನೆಯಲ್ಲಿ ಜಾಗೃತ ಕರ್ನಾಕಟ ಪದಾಧಿಕಾರಿಗಳಾದ ಡಾ.ಎಚ್.ವಿ.ವಾಸು, ಬಿ.ಸಿ.ಬಸವರಾಜು, ರಾಜಶೇಖರ್ ಅಕ್ಕಿ, ರಾಜಲಕ್ಷ್ಮೀ ಅಂಕಲಗಿ, ಮುತ್ತುರಾಜು, ಹಿರಿಯ ಪತ್ರಕರ್ತರಾದ ಡಿ.ಉಮಾಪತಿ, ಸುನೀಲ್ ಸಿರಸಂಗಿ, ಸಿಜೆಪಿಯ ರಾಹುಲ್ ಸೇರಿದಂತೆ ಸಿಜೆಪಿಯ ಕಾರ್ಯಕರ್ತರು ಭಾಗವಹಿಸಿದ್ದರು.