ಸಾಂದರ್ಭಿಕ ಚಿತ್ರ

ಬೆಂಗಳೂರು : ಮದುವೆಯಾಗುವುದಾಗಿ ನಂಬಿಸಿ ‘ಲಿವ್‌ಇನ್ ಟುಗೆದರ್’ ಸಂಬಂಧದಲ್ಲಿದ್ದ ಪ್ರಿಯಕರನು, ಆತನ ಮನೆಯವರು ಅಂತರ್ಜಾತಿ ವಿವಾಹಕ್ಕೆ ಒಪ್ಪುತ್ತಿಲ್ಲವೆಂದು ನೆಪ ಹೇಳಿ ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಿ ಕೇರಳಂ ಮೂಲದ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಚನ್ನರಾಯಪಟ್ಟಣ ತಾಲೂಕಿನ ಕಲ್ಲೇಸೋಮಹಳ್ಳಿ ಗ್ರಾಮದ ಸೂರ್ಯ (26) ನಾಪತ್ತೆಯಾಗಿರುವ ಯುವಕನಾಗಿದ್ದು, ಆತ ಕಾಸರಗೋಡು ಮೂಲದ ಯುವತಿಯನ್ನು ವಿವಾಹವಾಗುವುದಾಗಿ ಹೇಳಿ ನಂಬಿಸಿ, ಐದು ತಿಂಗಳಿನಿಂದ ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದರು.

ಈ ವಿಚಾರವನ್ನು ಸೂರ್ಯ ತನ್ನ ಪೋಷಕರಿಗೂ ತಿಳಿಸಿದ್ದು, ಮೊದಲು ಆತನ ಪೋಷಕರು ಮದುವೆಗೆ ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ.

ಆದರೆ, ಯುವತಿಯ ತಾಯಿ ಮದುವೆಗೆ ವಿರೋಧ ವ್ಯಕ್ತಪಡಿಸಿ ಮಗಳೊಂದಿಗಿನ ಸಂಪರ್ಕ ಕಡಿದುಕೊಂಡಿದ್ದರು.

ಸೂರ್ಯನ ಸ್ನೇಹಿತ ಪ್ರವೀಣ್ ತನ್ನ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ಸೂರ್ಯನ ಪೋಷಕರಿಗೆ ತಿಳಿಸಿದ್ದಾನೆ. ಇದರಿಂದಾಗಿ ಸೂರ್ಯನ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.

ಸೆ.24ರಂದು ತನ್ನ ಮೊಬೈಲ್ ಫೋನ್ ಬಿಟ್ಟು ಸೂರ್ಯ ನಾಪತ್ತೆಯಾಗಿದ್ದಾನೆ. ಈ ಕುರಿತು ಆತನ ಪೋಷಕರನ್ನು ವಿಚಾರಿಸಿದಾಗ, ತಮಗೆ ಏನೂ ತಿಳಿದಿಲ್ಲ ಎಂದು ಹೇಳಿದ್ದಲ್ಲದೆ, ಪದೇಪದೇ ಕರೆ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಆರೋಪಿ ಸೂರ್ಯ ಹಾಗೂ ಆತನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor