Bengaluru | ವೃದ್ಧೆಗೆ ನಂಬಿಸಿ ಚಿನ್ನಾಭರಣ ದೋಚಿದ್ದ ಜ್ಯೋತಿಷಿ ಸೆರೆ
ಸಾಂದರ್ಭಿಕ ಚಿತ್ರ (AI)
ಬೆಂಗಳೂರು : ಜ್ಯೋತಿಷ್ಯ ಹೇಳುವ ನೆಪದಲ್ಲಿ ವೃದ್ಧೆಯೊಬ್ಬರನ್ನು ನಂಬಿಸಿ ಸುಮಾರು 40 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದ ಜ್ಯೋತಿಷಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ 200 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಯನ್ನು ವೆಂಕಟೇಶ್ ಎಂದು ಗುರುತಿಸಲಾಗಿದೆ.
ಅನಾರೋಗ್ಯದ ನಿಮಿತ್ತ ಆಗಾಗ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುತ್ತಿದ್ದ ಶಾಂತಮ್ಮ ಅವರಿಗೆ ವೆಂಕಟೇಶ್ ಪರಿಚಯವಾಗಿದ್ದ. ತನಗೆ ಪದೇ ಪದೇ ಕಾಡುತ್ತಿರುವ ಅನಾರೋಗ್ಯದ ಬಗ್ಗೆ ಶಾಂತಮ್ಮ ಭವಿಷ್ಯ ಕೇಳಿದಾಗ, ಕೆಲವೇ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದು ವೆಂಕಟೇಶ್ ನಂಬಿಸಿದ್ದ.
ಕಾಕತಾಳೀಯ ಎಂಬಂತೆ ಶಾಂತಮ್ಮ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದ್ದರಿಂದ ಆತನ ಮೇಲೆ ನಂಬಿಕೆ ಬಂತು. ಬಳಿಕ ಮಗನ ಕುಡಿತದ ಚಟ ಹಾಗೂ ಮಗಳ ಮದುವೆ ವಿಚಾರವಾಗಿ ಆರೋಪಿಯಿಂದ ಸಲಹೆ ಪಡೆಯಲು ಶಾಂತಮ್ಮ ನಿರ್ಧರಿಸಿದ್ದರು. ಮನೆಗೆ ಬಂದ ಶಾಂತಮ್ಮ ಅವರಿಗೆ ನಿಂಬೆಹಣ್ಣು ನೀಡಿ ಪೂಜೆ ಮಾಡಬೇಕು ಎಂದಿದ್ದ ವಂಚಕ, ಮನೆಯಲ್ಲಿದ್ದ ಚಿನ್ನಾಭರಣಗಳಿಗೆ ಪೂಜೆ ಸಲ್ಲಿಸಿದರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ನಂಬಿಸಿದ್ದ. ಅದರಂತೆ ಪ್ರತಿ ಅಮಾವಾಸ್ಯೆಯಂದು ಶಾಂತಮ್ಮ ಅವರ ಮನೆಗೆ ಬಂದು ಒಡವೆಗಳನ್ನು ಪಡೆದುಕೊಂಡು ಹೋಗುತ್ತಿದ್ದನು. ಹೀಗೆ ಕಳೆದ ಒಂದು ವರ್ಷದ ಅವಧಿಯಲ್ಲಿ ಅಂದಾಜು 40 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಆರೋಪಿ ಪಡೆದುಕೊಂಡಿದ್ದನು.
ಆಗಸ್ಟ್ 19ರಂದು ಒಡವೆಗಳನ್ನು ವಾಪಸ್ ಕೇಳಿದಾಗ ಆರೋಪಿ ವೆಂಕಟೇಶ್, ತಾನು ಅಪಘಾತದಲ್ಲಿ ಸಾಯುವ ಸ್ಥಿತಿಯಲ್ಲಿದ್ದೇನೆ ಎಂದು ಬಿಂಬಿಸುವ ಎಐ ನಕಲಿ ವಿಡಿಯೋ ಕಳುಹಿಸಿ ವಂಚಿಸಿದ್ದನು. ಮೋಸಹೋಗಿರುವುದನ್ನು ಅರಿತ ಶಾಂತಮ್ಮ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಆಂಧ್ರಪ್ರದೇಶದಲ್ಲಿದ್ದ ಆರೋಪಿಯನ್ನು ಬಂಧಿಸಿ 200 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.