ಗ್ರಾಮ ಠಾಣಾ ಗಡಿ ತ್ವರಿತ ಪೂರ್ಣಗೊಳಿಸುವಂತೆ ಡಿ.ಕೆ.ಶಿವಕುಮಾರ್ ಸೂಚನೆ
ಬೆಂಗಳೂರು : ಗ್ರಾಮ ಠಾಣಾ ಗಡಿಯನ್ನು ನಿಗದಿಪಡಿಸುವ ಕಾರ್ಯವನ್ನು ತ್ವರಿತಗೊಳಿಸಿ ಪೂರ್ಣಗೊಳಿಸಬೇಕು. ಇದಕ್ಕಾಗಿ ಸ್ವಮಿತ್ವ ದತ್ತಾಂಶವನ್ನು ಬಳಸಿಕೊಳ್ಳಬೇಕು. ಪಂಚಾಯತ್ ರಾಜ್ ಮತ್ತು ಕಂದಾಯ ಇಲಾಖೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ.
ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೈಗಾರಿಕೆಗಳಿಗೆ ತೆರಿಗೆ ಹಾಕುವ ಅಧಿಕಾರವನ್ನು ಗ್ರಾಮ ಪಂಚಾಯಿತಿಗಳಿಂದ ಕೆಐಎಡಿಬಿ ಹಿಂಪಡೆದಿರುವುದರಿಂದ ಗ್ರಾಮ ಪಂಚಾಯಿತಿಗಳ ಆದಾಯ ಕಡಿತವಾಗಿರುವುದು ಗಮನಕ್ಕೆ ಬಂದಿದೆ. ಪ್ರಾಧಿಕಾರವು ಸಂಗ್ರಹಿಸಿದ ಸ್ವತ್ತಿನ ತೆರಿಗೆಯ ಶೇ.30 ರಷ್ಟು ಗ್ರಾಮ ಪಂಚಾಯಿತಿಗಳಿಗೆ ನೀಡಲು ಅಧಿನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ. ಪ್ರಾಧಿಕಾರ ಇದುವರೆಗೆ ಸಂಗ್ರಹಿಸಿರುವ ತೆರಿಗೆ ಮೊತ್ತ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆ ಮಾಡಿರುವ ಮೊತ್ತದ ಸಂಪೂರ್ಣ ವಿವರಗಳನ್ನು ಒದಗಿಸಿ ಎಂದು ಅಧಿಕಾರಿಗಳಿಗೆ ಹೇಳಿದರು.
ಗ್ರಾಮ ಪಂಚಾಯಿತಿಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಮೂಲಕ ವಿಕೇಂದ್ರೀಕರಣ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, 5ನೆ ಹಣಕಾಸು ಆಯೋಗದ ವರದಿಯ ಹಣಕಾಸು ಹಂಚಿಕೆ ಹಾಗೂ ಆಡಳಿತ ಸುಧಾರಣೆಗೆ ಸಂಬಂಧಿಸಿದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಕುರಿತಾಗಿ ಗ್ರಾಮೀಣಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗುವುದು. ಸಮಿತಿಯು ಅನುಷ್ಠಾನಗೊಳಿಸಬಹುದಾದ ಶಿಫಾರಸುಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲಿದೆ ಎಂದರು.
5ನೆ ರಾಜ್ಯ ಹಣಕಾಸು ಆಯೋಗದ ವರದಿಯಂತೆ ಗ್ರಾಮ ಪಂಚಾಯಿತಿಗಳಿಗೆ ಒಟ್ಟು 1261 ಕೋಟಿ ರೂ., ತಾಲೂಕು ಪಂಚಾಯಿತಿಗಳಿಗೆ ಒಟ್ಟು 557 ಕೋಟಿ ರೂ., ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಒಟ್ಟು 183 ಕೋಟಿ ರೂ., ಬಿಡುಗಡೆ ಮಾಡಲಾಗಿದೆ. ಸಂವಿಧಾನದ 74ನೆ ತಿದ್ದುಪಡಿಯ ಆಶಯದಂತೆ ನಗರ ಸ್ಥಳೀಯ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಕಾಯ್ದೆಗಳಿಗೆ ಸೂಕ್ತ ತಿದ್ದುಪಡಿ ತರುವ ಕುರಿತಾಗಿ ರಾಷ್ಟ್ರೀಯ ಕಾನೂನು ಕಾಲೇಜಿನ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.
ಗ್ರಾಮಸಭೆಗಳ ಮಾದರಿಯಲ್ಲಿ ವಾರ್ಡ್ ಸಭೆಗಳ ಮೂಲಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕಾಗಿದೆ. ಈಗಾಗಲೇ ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಹಾಗೂ ಗ್ರಾಮ ಮಟ್ಟದಲ್ಲಿ ಜಿಲ್ಲಾ ಯೋಜನಾ ಸಮಿತಿಗಳನ್ನು ರಚಿಸಲಾಗಿದ್ದು, ಈ ಎಲ್ಲಾ ಸಮಿತಿಗಳು ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಿ ವರದಿಯನ್ನು ಸಲ್ಲಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಯೋಜನಾ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲು ಅವಶ್ಯಕವಾದ ಅನುದಾನವನ್ನು ಒದಗಿಸಬೇಕು. ತಳಮಟ್ಟದಿಂದ ಜನರ ಬೇಡಿಕೆಗಳನ್ನು ಪಡೆದು ರಾಜ್ಯ ಆಯವ್ಯಯದಲ್ಲಿ ಒಳಗೂಡಿಸುವ ನಿಟ್ಟಿನಲ್ಲಿ ʻಜನರ ಯೋಜನೆʼ ಯನ್ನು ಜಾರಿಗೊಳಿಸುವುದಾಗಿ ಬಜೆಟ್ ನಲ್ಲಿ ನಾವು ಘೋಷಿಸಿದ್ದೇವೆ. ಈ ಕುರಿತಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬೇಕು. ಇದಕ್ಕೆ ಅಗತ್ಯವಾದ ತಂತ್ರಾಂಶವನ್ನು ರೂಪಿಸಿ ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಶಾಸಕರಾದ ಲತಾ ಮಲ್ಲಿಕಾರ್ಜುನ, ಗೋವಿಂದಪ್ಪ, ಪರಿಷತ್ ಸದಸ್ಯ ಎಸ್.ರವಿ, ಸಮಿತಿಯ ಉಪಾಧ್ಯಕ್ಷ ಡಿ.ಆರ್.ಪಾಟೀಲ್, 5ನೆ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ಮತ್ತಿತರರು ಉಪಸ್ಥಿತರಿದ್ದರು.
ಜಿಎಸ್ಟಿ ಮಂಡಳಿಗೆ ಪ್ರಸ್ತಾವನೆ: ‘ಕರ್ನಾಟಕ ಪಂಚಾಯತ್ ಆಡಳಿತಾತ್ಮಕ ಸೇವೆಯನ್ನು ಪ್ರಾರಂಭಿಸುವ ಕುರಿತಾಗಿ ಇಲಾಖೆಯ ಸಚಿವರಿಂದ ಪ್ರಸ್ತಾವನೆಯನ್ನು ಪಡೆಯಲಾಗುವುದು. ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಜಿಎಸ್ಟಿಯಲ್ಲಿ ಪಾಲು ನೀಡುವ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಜಿಎಸ್ಟಿ ಮಂಡಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು’ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.