Bengaluru | ಪತ್ನಿಯನ್ನು ಕೊಂದು ಪರಾರಿಯಾದ ಪತಿ, ಪ್ರಕರಣ ದಾಖಲು
ಬೆಂಗಳೂರು : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿ, ಪರಾರಿಯಾಗಿರುವ ಘಟನೆ ಪಣತ್ತೂರಿನಲ್ಲಿ ನಡೆದಿದ್ದು, ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಣತ್ತೂರಿನ ದುರ್ಗಮ್ಮ (36) ಕೊಲೆಯಾದ ಮಹಿಳೆಯಾಗಿದ್ದು, ಆಕೆಯ ಪತಿ ಬಸವರಾಜು (42) ಕೊಲೆ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಬಸವರಾಜು ಹಾಗೂ ದುರ್ಗಮ್ಮಗೆ ಮದುವೆಯಾಗಿ ಸುಮಾರು 20 ವರ್ಷಗಳಾಗಿತ್ತು. ಈ ಹಿಂದೆ ಬಸವರಾಜು ಅಪಘಾತಕ್ಕೀಡಾಗಿದ್ದರಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ. ಹೀಗಾಗಿ ದುರ್ಗಮ್ಮ ಹೌಸ್ಕೀಪಿಂಗ್ ಕೆಲಸ ಮಾಡಿಕೊಂಡು ಕುಟುಂಬವನ್ನು ನಿರ್ವಹಿಸುತ್ತಿದ್ದರು. ಈ ನಡುವೆ ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಬಸವರಾಜು, ಇದೇ ವಿಚಾರವಾಗಿ ಆಗಾಗ ಜಗಳವಾಡುತ್ತಿದ್ದ ಎನ್ನಲಾಗಿದೆ.
ರವಿವಾರ ತಡರಾತ್ರಿ 12.30ರ ಸಮಯದಲ್ಲಿ ಇದೇ ರೀತಿ ಜಗಳ ಉಂಟಾಗಿ ಆರೋಪಿ ಬಸವರಾಜ್ ಕೊಡಲಿಯಿಂದ ದುರ್ಗಮ್ಮ ಅವರ ತಲೆ ಹಾಗೂ ಮುಂತಾದ ಭಾಗಗಳಿಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ವಿಷಯ ತಿಳಿದ ದುರ್ಗಮ್ಮ ಅವರ ತಮ್ಮ ಯಮನಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.