ಸಾಂದರ್ಭಿಕ ಚಿತ್ರ

ಬೆಂಗಳೂರು  : ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಯೂನಿಯನ್ ವತಿಯಿಂದ ಬಿಸಿಯೂಟ ತಯಾರಕರಿಗೆ ಮಾಸಿಕ 10 ಸಾವಿರ ರೂ. ವೇತನ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ನಗರದ ಫ್ರೀಡಂ ಪಾರ್ಕ್‍ನಲ್ಲಿ ಸೋಮವಾರ ಅಹೋರಾತ್ರಿ ಧರಣಿ ನಡೆಸಲಾಯಿತು.

ಸುಮಾರು ವರ್ಷಗಳಿಂದ ನಾವು ಬಿಸಿಯೂಟ ತಯಾರಕರಾಗಿ ಕೆಲಸ ಮಾಡುತ್ತಿದ್ದೇವೆ. ಕೇವಲ 400 ರೂ., 300 ರೂ. ವೇತನ ನೀಡುತ್ತಿದ್ದರು. ನಮ್ಮ ಹೋರಾಟದ ಫಲವಾಗಿ ಈಗ 4200 ರೂ. ನೀಡಲಾಗುತ್ತಿದೆ. ಈಗ ಕ್ಲಸ್ಟರ್ ಕಿಚನ್ ಸೆಂಟರ್ ಮಾಡುವ ಮೂಲಕ ಬಿಸಿಯೂಟ ಸಿಬ್ಬಂದಿಯ ಕೆಲಸ ಕಿತ್ತುಕೊಳ್ಳುವ ಹುನ್ನಾರವನ್ನು ಸರಕಾರ ಮಾಡುತ್ತಿದೆ. ಸರಕಾರ ಕ್ಲಸ್ಟರ್ ಕಿಚನ್ ಆರಂಭಿಸಬಾರದು ಎಂದು ಧರಣಿನಿರತರು ಆಗ್ರಹಿಸಿದರು.

2 ಲಕ್ಷ ರೂ. ಇಡಿಗಂಟು ನೀಡಬೇಕು. ಬಿಸಿಯೂಟ ತಯಾರಕರಿಗೆ ಇಎಫ್, ಪಿಎಫ್ ಸೌಲಭ್ಯ ನೀಡಬೇಕು. ಆದಷ್ಟು ಶೀಘ್ರವಾಗಿ ನಮಗೆ ಸರಕಾರ ಸ್ಪಂಧಿಸಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ನಮಗೆ ಬರುವ ವೇತನ ಯಾವುದಕ್ಕೂ ಸಾಲುವುದಿಲ್ಲ. ಸುಮಾರು 10 ಸಾವಿರ ರೂ.ಗೆ ಹೆಚ್ಚಿಸಬೇಕು. ಬರುವ ಅಲ್ಪಸ್ವಲ್ಪ ಸಂಬಳ ಕೂಡ ನಾಲ್ಕು ತಿಂಗಳಿಗೊಮ್ಮೆ ಬರುತ್ತದೆ. ಬೆಳಗ್ಗೆ 9:30ರಿಂದ ಕೆಲಸಕ್ಕೆ ಬರುತ್ತೇವೆ. ಮಧ್ಯಾಹ್ನ 3ಗಂಟೆಗೆ ಮನೆಗೆ ಹೋಗುತ್ತೇವೆ ಆದ್ದರಿಂದ ನಮಗೆ 10 ಸಾವಿರ ವೇತನ ನಿಗದಿ ಪಡಿಸಬೇಕು ಎಂದು ಆಗ್ರಹಿಸಿದರು.

ಧರಣಿಯಲ್ಲಿ ವಿವಿಧ ಜಿಲ್ಲೆ, ಬೆಂಗಳೂರಿನ ವಿವಿಧೆಡೆಯಿಂದ ಬಂದಿದ್ದ ನೂರಾರು ಮಹಿಳೆಯರು ಭಾಗವಹಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor