ಸಾಂದರ್ಭಿಕ ಚಿತ್ರ | Photo credit : AI

ಬೆಂಗಳೂರು: ಹಲಸೂರು ಬಳಿಯಿರುವ ಕಾನ್ರಾಡ್ ಹೋಟೆಲ್‍ನ ಈಜುಕೊಳದಲ್ಲಿ ಸಂಭವಿಸಿದ ವಿದ್ಯುತ್ ಅವಘಡದಿಂದ ಇಬ್ಬರು ವಿದೇಶಿ ಪ್ರವಾಸಿಗರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಶುಕ್ರವಾರ ಸಂಜೆ ಕಾನ್ರಾಡ್ ಹೋಟೆಲ್‌ನ ಈಜುಕೊಳದಲ್ಲಿ ವಿದ್ಯುತ್ ಆಘಾತಕ್ಕೆ ಒಳಗಾಗಿ ಜರ್ಮನಿಯ ಅಲೆಕ್ಸಾಂಡರ್ ಮ್ಯಾಕ್ಸಿಮಿಲಿಯನ್ ಥೀಸ್ ಹಾಗೂ ಸ್ಲೋವಾಕಿಯಾದ ಜುರಾಜ್ ಒವರ್ಟ್ ಮೃತಪಟ್ಟಿದ್ದರು. ಈ ಕುರಿತು ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರಾಯಭಾರ ಕಚೇರಿಗಳಿಗೆ ಮಾಹಿತಿ

ಪ್ರಕರಣ ದಾಖಲಿಸಿಕೊಂಡಿದ್ದ ಹಲಸೂರು ಠಾಣೆ ಪೊಲೀಸರು ಮೃತರ ಸಂಬಂಧಿಕರು ಹಾಗೂ ಜರ್ಮನಿ ಮತ್ತು ಸ್ಲೋವಾಕಿಯಾ ರಾಯಭಾರ ಕಚೇರಿಗಳಿಗೆ ಮಾಹಿತಿ ನೀಡಿದ್ದರು. ಇದೀಗ ರಾಯಭಾರ ಕಚೇರಿಗಳು ಹಾಗೂ ಮೃತರ ಕುಟುಂಬಸ್ಥರಿಂದ ಅನುಮತಿ ದೊರೆತ ಹಿನ್ನೆಲೆಯಲ್ಲಿ ಇಂದು ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಮರಣೋತ್ತರ ಪರೀಕ್ಷೆಯ ಸಂಪೂರ್ಣ ವಿಡಿಯೊ ಚಿತ್ರೀಕರಣ :

ಮೃತರು ವಿದೇಶಿ ಪ್ರಜೆಗಳಾಗಿರುವ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಮರಣೋತ್ತರ ಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೊ ಚಿತ್ರೀಕರಣ ಮಾಡಲಾಗುತ್ತದೆ. ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಸಂಬಂಧಪಟ್ಟ ರಾಯಭಾರ ಕಚೇರಿಗಳು ನಿರಾಕ್ಷೇಪಣಾ ಪತ್ರ ನೀಡಿದ ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor