ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಪ್ರಕರಣ: ಕುಮಾರಸ್ವಾಮಿ ದಿಲ್ಲಿ ನಿವಾಸಕ್ಕೆ ಲಿಂಕ್ ಇದೆ ಎಂದ ಬೆಂಗಳೂರು ಪೊಲೀಸ್ ಆಯುಕ್ತ
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ದಿಲ್ಲಿಯ ನಿವಾಸಕ್ಕೆ ಲಿಂಕ್ ಇದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಖ್ಯೆ 56/2026ಕ್ಕೆ ಸಂಬಂಧಿಸಿದಂತೆ ಹಲವು ಪೊಲೀಸ್ ತಂಡಗಳು ತನಿಖೆ ನಡೆಸುತ್ತಿವೆ. ಈ ಪ್ರಕರಣದಲ್ಲಿ ದೆಹಲಿಯ ರಿತೇಶ್ ಪಾಂಡೆ ಎಂಬಾತನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ದೆಹಲಿಯ ಅಧಿಕೃತ ನಿವಾಸದಲ್ಲಿ ಕೆಲಸ ಮಾಡುವ ಪ್ರಜ್ವಲ್ ಪ್ರಸಾದ್ ಎಂಬಾತ ರಿತೇಶ್ ಪಾಂಡೆಗೆ ಮೊಬೈಲ್ ಖರೀದಿಸುವಂತೆ ಸೂಚಿಸಿರುವುದು ತಿಳಿದುಬಂದಿದೆ. ಅದರಂತೆ ರಿತೇಶ್ ಪಾಂಡೆ ದೆಹಲಿಯ ಕರೋಲ್ ಬಾಗ್‌ನಲ್ಲಿ ಮೊಬೈಲ್ ಖರೀದಿಸಿ, ಅದನ್ನು ಕುಮಾರಸ್ವಾಮಿ ಅವರ ಅಧಿಕೃತ ನಿವಾಸದಲ್ಲಿದ್ದ ಪ್ರಜ್ವಲ್ ಪ್ರಸಾದ್‌ಗೆ ನೀಡಲಾಗಿದೆ ಎಂದು ವಿವರಿಸಿದರು.
ಅದೇ ಮೊಬೈಲ್‌ನಲ್ಲಿ ಆಕ್ಷೇಪಾರ್ಹ ವಿಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಈ ಪ್ರಕರಣದಲ್ಲಿ ವಿನೋದ್ ಶರ್ಮಾ ಎಂಬಾತನ ಪಾತ್ರವೂ ಕಂಡುಬಂದಿದ್ದು, ಸದ್ಯ ಪ್ರಜ್ವಲ್ ಪ್ರಸಾದ್ ಹಾಗೂ ವಿನೋದ್ ಶರ್ಮಾ ನಾಪತ್ತೆಯಾಗಿದ್ದಾರೆ. ಅವರು ಪತ್ತೆಯಾದ ಬಳಿಕ ಇನ್ನಷ್ಟು ಮಾಹಿತಿ ಹೊರಬರಬೇಕಿದೆ ಎಂದು ಹೇಳಿದರು.
ರಿತೇಶ್ ಪಾಂಡೆ ಹಾಗೂ ಪ್ರಜ್ವಲ್ ಪ್ರಸಾದ್ ನಡುವೆ ಹಣಕಾಸಿನ ವ್ಯವಹಾರ ನಡೆದಿರುವುದು ಕೂಡ ತನಿಖೆಯಲ್ಲಿ ಪತ್ತೆಯಾಗಿದೆ. ಆದರೆ, ಯಾವ ಉದ್ದೇಶಕ್ಕಾಗಿ ಮತ್ತು ಯಾರ ಸೂಚನೆಯ ಮೇರೆಗೆ ಈ ವಿಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಪ್ರಕರಣದ ಎಲ್ಲ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.