ಬೆಂಗಳೂರು : ಪ್ರಧಾನಿ ಮೋದಿ ಅವರ ತಂದೆಯ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಯು ಯಾವುದೇ ವೈಯಕ್ತಿಕ ಟೀಕೆಯಲ್ಲ, ಅದೊಂದು ಸೈದ್ಧಾಂತಿಕ ವಿಮರ್ಶೆಯಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸಮರ್ಥಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನವೆಂಬರ್ 5ರಂದು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ, ಚುನಾವಣಾ ಆಯೋಗ ಹಾಗೂ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ರಾಜ್ಯಾದ್ಯಂತ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

‘ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ. ಬಿಜೆಪಿ ಹಾಗೂ ಆರೆಸ್ಸೆಸ್‍ನವರು ಈ ದೇಶವನ್ನು ‘ಮಾತೃಭೂಮಿ’ ಎನ್ನುವುದಿಲ್ಲ, ಬದಲಾಗಿ ‘ಪಿತೃಭೂಮಿ, ಪುಣ್ಯಭೂಮಿ’ ಎಂದು ಕರೆಯುತ್ತಾರೆ. ಖರ್ಗೆಯವರು ಇದೇ ಬಿಜೆಪಿ ಧಾಟಿಯಲ್ಲೇ ತಿರುಗೇಟು ನೀಡಿದ್ದು, ಪಿತೃಭೂಮಿ ಎನ್ನುವವರ ‘ಪಿತೃಗಳು’ ಖಾಲಿ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದರಲ್ಲಿ ಯಾವುದೇ ಅವಹೇಳನ ಅಥವಾ ವೈಯಕ್ತಿಕ ನಿಂದನೆ ಇಲ್ಲ’ ಎಂದು ವಿವರಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಆ ‘ಮಹಾಮಾನವ’ನ(ಮೋದಿ) ಬಗ್ಗೆ ಮಾತನಾಡಿಲ್ಲ. ಒಂದು ವೇಳೆ ಈ ಮಹಾಮಾನವ ಟೆಲಿಪ್ರಾಂಪ್ಟರ್ ಬಿಟ್ಟು ಮಾತನಾಡಲು ನಿಂತರೆ ಬಾಯಲ್ಲಿ ‘ಕಾಂಗ್ರೆಸ್ ವಿಧವೆ’, ‘ಜರ್ಸಿ ಹಸು’, ‘50 ಕೋಟಿ ರೂ.ಗಳ ಗರ್ಲ್‍ಫ್ರೆಂಡ್’ ಎಂಬಂತಹ ಅಣಿಮುತ್ತುಗಳೇ ಉದುರುತ್ತವೆ. ಬೆಂಕಿ ಹಚ್ಚುವ ಕೆಲಸವನ್ನು ಮೊದಲು ಶುರು ಮಾಡಿದ್ದೇ ಅವರು ಎಂದು ಹರಿಪ್ರಸಾದ್ ಕಿಡಿಕಾರಿದರು.

ಲೋಕಸಭೆಯಲ್ಲಿ ಇಂದಿರಾ ಗಾಂಧಿಯವರ ಬಗ್ಗೆ ಮಾತನಾಡುವ ಆ ‘ತಡಿಪಾರು’(ಗಡೀಪಾರಾದ ವ್ಯಕ್ತಿ), ಇಂದಿರಾ ಗಾಂಧಿಯವರ ಕಾಲಿನ ದೂಳಿಗೂ ಸಮಾನರಲ್ಲ. ಇನ್ನು, ‘ಸಾಮ್ರಾಟ್ ಅಶೋಕ’ನಿಗೆ(ಆರ್. ಅಶೋಕ್) ಎಂತಹ ಸಂಸ್ಕೃ ತಿ ಇದೆ ಎಂಬುದು ನನಗೆ ಚೆನ್ನಾಗಿ ಗೊತ್ತು. ಅವರಿಂದ ನಾನೇನೂ ಕಲಿಯಬೇಕಿಲ್ಲ ಎಂದು ಹರಿಪ್ರಸಾದ್, ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಎಸ್‍ಐಆರ್ ವಿರುದ್ಧ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಬೃಹತ್ ಹೋರಾಟದ ಮುಂದುವರಿದ ಭಾಗವಾಗಿ, ನ.5ರಂದು ಬೆಂಗಳೂರಿನಲ್ಲಿಯೂ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಿದ್ಧತಾ ಸಭೆಗಳನ್ನು ನಡೆಸಲಾಗಿದ್ದು, ಸಿಪಿಐ, ಸಿಪಿಎಂ ಸೇರಿದಂತೆ ‘ಇಂಡಿಯಾ’ ಮೈತ್ರಿಕೂಟದ ನಾಯಕರು ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದು ಬಿ.ಕೆ.ಹರಿಪ್ರಸಾದ್ ಮಾಹಿತಿ ನೀಡಿದರು.

ಎಐಸಿಸಿ ಸೂಚನೆಯ ಮೇರೆಗೆ ‘ವೋಟ್ ಚೋರಿ, ದೇಶ್ ಬಚಾವೋ, ವೋಟ್ ಬಚಾವೋ’ ಶೀರ್ಷಿಕೆಯಡಿ ಮುಂದಿನ ಎರಡು ತಿಂಗಳ ಕಾಲ ರಾಜ್ಯದ ಎಲ್ಲ ಜಿಲ್ಲಾ ಹಾಗೂ ಬ್ಲಾಕ್‍ಮಟ್ಟದಲ್ಲಿ ನಿರಂತರವಾಗಿ ಅಭಿಯಾನ ಮತ್ತು ಹೋರಾಟ ನಡೆಯಲಿದೆ. ಪ್ರತಿಬ್ಲಾಕ್‍ನಲ್ಲಿ ಮಹಾತ್ಮ ಗಾಂಧೀಜಿ ಅಥವಾ ಡಾ.ಅಂಬೇಡ್ಕರ್ ಪ್ರತಿಮೆಗಳ ಎದುರು ಪ್ರತಿಭಟನೆ ನಡೆಸಿ, ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಅವರು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor