ನಟ ಧನ್ವೀರ್ ವಿರುದ್ಧ ಮೂರು ಪ್ರತ್ಯೇಕ ದೂರು ದಾಖಲು
ಧನ್ವೀರ್ | PC : instagram
ಬೆಂಗಳೂರು : ನಟ ಧನ್ವೀರ್ ವಿರುದ್ದ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮೂರು ಪ್ರತ್ಯೇಕ ದೂರುಗಳು ದಾಖಲಾಗಿವೆ.
ವಿಜಯಲಕ್ಷ್ಮೀ ಅವರ ಮ್ಯಾನೇಜರ್ ನಾಗರಾಜ್ ಅವರಿಗೆ ಧನ್ವೀರ್ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರ್.ಆರ್. ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಧನ್ವೀರ್ ಅವರು ತಮ್ಮ ಹಾಗೂ ಸ್ನೇಹಿತರ ವಿಮಾನ ಟಿಕೇಟ್ ಬುಕ್ಕಿಂಗ್‍ಗಾಗಿ ಐದು ಲಕ್ಷ ರೂ. ಹಣ ಪಡೆದು ವಾಪಸ್ ನೀಡಿಲ್ಲ. ಅಲ್ಲದೇ ತಮ್ಮ ಕಾರನ್ನು ಪಡೆದುಕೊಂಡು ಅದನ್ನೂ ಹಿಂದಿರುಗಿಸಿಲ್ಲ. ಹಣ ಮತ್ತು ಕಾರು ವಾಪಸ್ ಕೇಳಿದ್ದಕ್ಕೆ ನಿಂದಿಸಿ ಬೆದರಿಕೆ ಹಾಕಿದ್ದಾರೆಂದು ಗೌರವ್ ಖಾಟೇರ್ ಎಂಬುವವರು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಧನ್ವೀರ್ ಮನೆ ಬಳಿ ನಡೆದ ಗಲಾಟೆ ಸಂದರ್ಭದಲ್ಲಿ ಮಧ್ಯಸ್ಥಿಕೆಗೆ ಹೋಗಿದ್ದ ಭೋಜರಾಜ್ ರೈ ಅವರಿಗೆ ಮೊಬೈಲ್ ಕರೆ ಮಾಡಿ ಧಮ್ಮಿ ಹಾಕಿದ್ದಾರೆಂದು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಮೂರು ಪೊಲೀಸ್ ಠಾಣೆಗಳಲ್ಲಿ ನೀಡಿದ ದೂರಿನ ಅನ್ವಯ ನಟ ಧನ್ವೀರ್ ವಿರುದ್ಧ ಎನ್‍ಸಿಆರ್ ದಾಖಲಾಗಿದೆ.