ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಪ್ರಕರಣ: ಪವರ್ ಟಿವಿ ಕಚೇರಿ, ರಾಕೇಶ್ ಶೆಟ್ಟಿ ನಿವಾಸದ ಮೇಲೆ ಸಿಸಿಬಿ ದಾಳಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿ ಪವರ್ ಟಿವಿ ಕಚೇರಿ ಹಾಗೂ ಅದರ ಮಾಲಕ ರಾಕೇಶ್ ಶೆಟ್ಟಿ ಅವರ ಕೊಡಿಗೇಹಳ್ಳಿಯ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದು ಸುಮಾರು 30 ಅಧಿಕಾರಿಗಳಿದ್ದ ಸಿಸಿಬಿ ತಂಡವು ಏಕಕಾಲದಲ್ಲಿ ರಾಕೇಶ್ ಶೆಟ್ಟಿ ಅವರ ನಿವಾಸ ಹಾಗೂ ಅವರ ಮಾಲೀಕತ್ವದ ಪವರ್ ಟಿವಿ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ಸಿದ್ದರಾಮಯ್ಯ ವಿರುದ್ಧ ಹರಿಬಿಡಲಾದ ವಿಡಿಯೊವನ್ನು ತಾವೇ ರೆಕಾರ್ಡ್ ಮಾಡಿದ್ದಾಗಿ ರಾಕೇಶ್ ಶೆಟ್ಟಿ ಈ ಹಿಂದೆ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಅಲ್ಲದೆ, ಅವರ ಕಚೇರಿ ಮೇಲೆ ದಾಳಿ ನಡೆಸಿದರೆ ಇಂತಹ ಇನ್ನೂ ಹಲವು ವಿಡಿಯೊಗಳು ಲಭ್ಯವಾಗಲಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು.
ಈ ಬೆಳವಣಿಗೆಗಳ ಬೆನ್ನಲ್ಲೇ ಇಂದು ಸಿಸಿಬಿ ಅಧಿಕಾರಿಗಳು ಪವರ್ ಟಿವಿ ಕಚೇರಿ ಹಾಗೂ ರಾಕೇಶ್ ಶೆಟ್ಟಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದು, ಪರಿಶೀಲನೆ ಮುಂದುವರಿಸಿದ್ದಾರೆ.