ಬೆಂಗಳೂರು : ಸ್ವಪ್ನ ಬುಕ್ ಹೌಸ್ ಜಾತಿ, ಮತ, ಧರ್ಮ, ಲಿಂಗ ಹಾಗೂ ಉತ್ತರ-ದಕ್ಷಿಣ ಕರ್ನಾಟಕ ಎಂಬ ಯಾವುದೇ ಪ್ರಾದೇಶಿಕ ಭೇದಭಾವವಿಲ್ಲದೆ ಎಲ್ಲಾ ಲೇಖಕರಿಗೂ ಸಮಾನ ಪ್ರೋತ್ಸಾಹ ನೀಡುತ್ತಿರುವ ಏಕೈಕ ಪ್ರಕಾಶನ ಸಂಸ್ಥೆಯಾಗಿದೆ ಎಂದು ನಾಡೋಜ ಪ್ರೊ. ಹಂಪ ನಾಗರಾಜಯ್ಯ ಹೇಳಿದ್ದಾರೆ.

ರವಿವಾರ ಇಲ್ಲಿನ ಗಾಂಧಿನಗರದ ಸ್ವಪ್ನ ಬುಕ್ ಹೌಸ್‌ನಲ್ಲಿ 71ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆದ ಪುಸ್ತಕ ಜಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1956ರ ನ.1ರಂದು ಸೆಂಟ್ರಲ್ ಕಾಲೇಜಿನ ಕ್ರೀಡಾಂಗಣದಲ್ಲಿ ಅಂದಿನ ರಾಜ್ಯಪಾಲರಾದ ಜಯಚಾಮರಾಜ ಒಡೆಯರ್ ಮೊದಲ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. ಆ ಸುದಿನದಂದು ನಾನು ಭಾಗವಹಿಸಿದ್ದೆ. ಇದೀಗ 71ನೇ ರಾಜ್ಯೋತ್ಸವದ ಸಂದರ್ಭದಲ್ಲೂ ಇರುವುದು ನನ್ನ ಸೌಭಾಗ್ಯ ಎಂದು ಅವರು ಹೇಳಿದರು.

ಕನ್ನಡಿಗರ ಸಮಗ್ರ ಸಾಹಿತ್ಯ ಒಂದೇ ಸೂರಿನಡಿ ಸಿಗಬೇಕು ಎಂಬ ಕನಸನ್ನು ನನಸು ಮಾಡಿ, ಕನ್ನಡ ಪುಸ್ತಕ ಸಂಸ್ಕೃತಿಯನ್ನು ಹೆಮ್ಮರವಾಗಿ ಬೆಳೆಸಿದ ಕೀರ್ತಿ ಸ್ವಪ್ನ ಬುಕ್ ಹೌಸ್ ಸಂಸ್ಥೆಗೆ ಸಲ್ಲುತ್ತದೆ. ಪುಸ್ತಕ ಮುದ್ರಣ, ಮಾರಾಟ ಹಾಗೂ ರಾಯಧನ ನೀಡಿಕೆಯಲ್ಲಿ ಅತ್ಯಂತ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಕಾಯ್ದು ಕೊಂಡಿರುವುದರಿಂದ ಲೇಖಕರೆಲ್ಲರಿಗೂ ಸ್ವಪ್ನ ಸಂಸ್ಥೆ ಮಾತೃ ಸಂಸ್ಥೆಯಂತೆ ನೆಚ್ಚಿನ ತಾಣವಾಗಿದೆ ಎಂದು ಅವರು ಹೇಳಿದರು.

ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನಟ ದೊಡ್ಡಣ್ಣ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor