ಬೆಂಗಳೂರು : ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಮಂಗಳವಾರ ಬೆಳ್ಳಂಬೆಳಗ್ಗೆ ದಿಢೀರ್ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರು, ವ್ಯಾಪಾರಿಗಳು ಹಾಗೂ ಮಂಡಿ ಮಾಲೀಕರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಬೆಳೆ ವಿಮೆ ಹಣವನ್ನು ಡಿಸಿಸಿ ಬ್ಯಾಂಕ್‌ಗೆ ಪಾವತಿಸದೇ 93 ರೈತರ ವಿಮೆ ತಿರಸ್ಕೃತಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಸಹಾಯ ಸೊಸೈಟಿ ಕಾರ್ಯದರ್ಶಿಯನ್ನು ವಜಾಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳಗಾವಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಟ್ಟನಹಳ್ಳಿ ಗ್ರಾಮದ ರೈತರು, ಬೆಳೆ ವಿಮೆಗೆ ಹಣವನ್ನು ಸ್ವಸಹಾಯ ಸೊಸೈಟಿಗೆ ಪಾವತಿಸಿದ್ದರೂ ಅದನ್ನು ಡಿಸಿಸಿ ಬ್ಯಾಂಕ್‌ಗೆ ಜಮೆ ಮಾಡದ ಕಾರಣ ವಿಮೆ ತಿರಸ್ಕೃತಗೊಂಡಿದೆ ಎಂದು ಸಿಎಂ ಮುಂದೆ ಅಳಲು ತೋಡಿಕೊಂಡರು. ರೈತರು ಸಲ್ಲಿಸಿದ್ದ ಪಾವತಿ ಪಟ್ಟಿಯನ್ನು ಪರಿಶೀಲಿಸಿದ ಸಿಎಂ, ನಿರ್ಲಕ್ಷ್ಯ ತೋರಿದ ಕಾರ್ಯದರ್ಶಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಮಾರುಕಟ್ಟೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಹಾಗೂ ತೆಂಗಿನ ಬೆಳೆಗಾರರೊಂದಿಗೆ ಮಾತನಾಡಿದ ಸಿಎಂ, ಪೊಲೀಸರು ಹಣ ವಸೂಲಿ ಮಾಡುತ್ತಾರೆಯೇ, ರೈತರಿಗೆ ಸಮಯಕ್ಕೆ ಸರಿಯಾಗಿ ಹಣ ಸಿಗುತ್ತಿದೆಯೇ, ತೂಕದಲ್ಲಿ ಮೋಸವಾಗುತ್ತಿದೆಯೇ, ಕಮಿಷನ್ ಪಡೆಯಲಾಗುತ್ತಿದೆಯೇ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಈರುಳ್ಳಿ ಚೀಲಗಳ ತೂಕವನ್ನು ಖುದ್ದಾಗಿ ಪರಿಶೀಲಿಸಿದರು.

ಕಲಬುರಗಿ, ಬೀದರ್ ಹಾಗೂ ವಿಜಯಪುರ ಮಾರುಕಟ್ಟೆಗಳಲ್ಲಿ ಕಮಿಷನ್ ವಸೂಲಿ ಮಾಡಲಾಗುತ್ತದೆ. ಆದರೆ ಯಶವಂತಪುರ ಎಪಿಎಂಸಿಯಲ್ಲಿ ರೈತರಿಂದ ಕಮಿಷನ್ ಪಡೆಯುವುದಿಲ್ಲ ಎಂದು ರೈತರು ಸಿಎಂಗೆ ತಿಳಿಸಿದರು.

ಈ ಬಾರಿ ಮಳೆ ಕೊರತೆಯಿಂದ ಈರುಳ್ಳಿ ಇಳುವರಿ ತೀವ್ರವಾಗಿ ಕುಸಿದಿದೆ. ಸಾಮಾನ್ಯವಾಗಿ ಎಕರೆಗೆ 150ರಿಂದ 200 ಚೀಲ ಈರುಳ್ಳಿ ಸಿಗುತ್ತಿದ್ದರೆ, ಈ ಬಾರಿ ಕೇವಲ 50 ಚೀಲ ಮಾತ್ರ ಬಂದಿದೆ ಎಂದು ರೈತರು ವಿವರಿಸಿದರು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರೈತರು, ಹೆಕ್ಟೇರ್‌ಗೆ 6,500 ರೂ. ಬೆಳೆ ವಿಮೆ ಪ್ರೀಮಿಯಂ ಪಾವತಿಸಿದ್ದರೂ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು. ಈ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು.

ಮಾರುಕಟ್ಟೆಯ ಮಂಡಿ ವ್ಯಾಪಾರಿಗಳೊಂದಿಗೆ ಮಾತನಾಡಿದ ಸಿಎಂ, ಎಪಿಎಂಸಿಗೆ ಎಷ್ಟು ಶುಲ್ಕ ಪಾವತಿಸುತ್ತೀರಿ ಎಂದು ವಿಚಾರಿಸಿದರು. ಯಾವುದೇ ರೀತಿಯ ಹೆಚ್ಚುವರಿ ಹಣ ಅಥವಾ ಅನಧಿಕೃತ ವಸೂಲಿ ನಡೆದರೆ ನೇರವಾಗಿ ತಿಳಿಸಿ, ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ರೈತರಿಂದ ನೇರವಾಗಿ ಬೆಳೆ ಖರೀದಿ ಮಾಡುವ ಸಂದರ್ಭದಲ್ಲಿ ತೂಕದಲ್ಲಿ ಮೋಸ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಟ್ಟಿ ಗ್ರಾಮದ ರೈತ ಆಂಜನಪ್ಪ, ತೋಟದ ಮನೆಯ ವಿದ್ಯುತ್ ಸಂಪರ್ಕಕ್ಕಾಗಿ ಮೂರು ಬಾರಿ ಅರ್ಜಿ ಸಲ್ಲಿಸಿದ್ದರೂ ಸಂಪರ್ಕ ಸಿಕ್ಕಿಲ್ಲ ಎಂದು ಸಿಎಂಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಎಲ್ಲ ಅರ್ಹ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ಗ್ಯಾರಂಟಿ ಯೋಜನೆಗಳ ಪ್ರಯೋಜನ ಸಿಗುತ್ತಿದೆಯೇ ಎಂದು ರೈತರನ್ನು ಸಿಎಂ ಪ್ರಶ್ನಿಸಿದರು. ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಸೇರಿದಂತೆ ಸರ್ಕಾರದ ಯೋಜನೆಗಳಿಂದ ಅನುಕೂಲವಾಗಿದೆ ಎಂದು ರೈತರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor