ರಮೇಶ್ ಬಾಬು

ಬೆಂಗಳೂರು : ಬಿಜೆಪಿ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರ ವಿರುದ್ಧ ಕೆಳಮಟ್ಟದ ಭಾಷೆ ಬಳಸಲಾಗಿದೆ. ಬಳ್ಳಾರಿಯ ಮಾಜಿ ಸಚಿವ ಬಿ.ಶ್ರೀರಾಮುಲು ಮತ್ತೆ ತಮ್ಮ ಹಳೆಯ ರಾಜಕೀಯ ಶೈಲಿಗೆ ಮರಳಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಶ್ರೀರಾಮುಲು ಏಕವಚನದಲ್ಲಿ ಮಾತನಾಡಿರುವುದನ್ನು ಖಂಡಿಸಿದ್ದಾರೆ.

ಲೋಕಾಯುಕ್ತ ತನಿಖೆ ಹಾಗೂ ವರದಿಯ ಬಳಿಕ ಬಳ್ಳಾರಿ ಗಣಿ ಪ್ರಕರಣದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ್ದನ್ನು ಮತ್ತು ಜನಾರ್ಧನ ರೆಡ್ಡಿ ಜೈಲು ಸೇರಿದ್ದನ್ನು ರಾಜ್ಯದ ಜನರು ಮರೆತಿಲ್ಲ ಎಂದು ಅವರು ಹೇಳಿದ್ದಾರೆ.

ಗಣಿ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಗಳನ್ನು ಉಲ್ಲೇಖಿಸಿದ ರಮೇಶ್ ಬಾಬು, ಶ್ರೀರಾಮುಲು ಮತ್ತು ಗಾಲಿ ಕುಟುಂಬಕ್ಕೆ ರಾಜ್ಯದ ಇತರ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಉಳಿದಿಲ್ಲ ಎಂದು ಆರೋಪಿಸಿದ್ದಾರೆ.

ಬಳ್ಳಾರಿಯಲ್ಲಿ ನಡೆದ ಗಣಿ ಪ್ರಕರಣಗಳು ಹಾಗೂ ಸುಗ್ಗಲಮ್ಮ ದೇವಾಲಯದ ವಿಚಾರವನ್ನು ಪ್ರಸ್ತಾಪಿಸಿದ ಅವರು, ತಮ್ಮ ರಾಜಕೀಯ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಶ್ರೀರಾಮುಲು ಕೀಳುಮಟ್ಟದ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜಕೀಯ ಅಧಿಕಾರಕ್ಕಾಗಿ ಶ್ರೀರಾಮುಲು ಬಿಜೆಪಿ ಪಾದಯಾತ್ರೆಗೆ ಜೋತುಬಿದ್ದಿದ್ದು, ಕರ್ನಾಟಕದ ಜನ ಬಳ್ಳಾರಿಯ ಗಣಿ ಪ್ರಕರಣಗಳನ್ನು ಎಂದಿಗೂ ಮರೆಯುವುದಿಲ್ಲ ಎಂದು ರಮೇಶ್ ಬಾಬು ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor