ಯಾವ ಕ್ಷೇತ್ರವೂ ‘ಸಹಕಾರ’ದಿಂದ ಹೊರತಾಗಿರಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ
‘ಸಹಕಾರ ಸಮೃದ್ಧಿ ಸೌಧ’ವನ್ನು ಲೋಕಾರ್ಪಣೆ
ಬೆಂಗಳೂರು, ಮೇ 8: ಯಾವ ಕ್ಷೇತ್ರವೂ ಸಹಕಾರ ಕ್ಷೇತ್ರದಿಂದ ಹೊರತಾಗಿರಲು ಸಾಧ್ಯವಿಲ್ಲ. ರೈತರ ಬೆಳವಣಿಗೆಗೆ ಸಹಕಾರ ಇಲಾಖೆ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ನಿಬಂಧಕರ ನೂತನ ಆಡಳಿತ ಕಚೇರಿ ‘ಸಹಕಾರ ಸಮೃದ್ಧಿ ಸೌಧ’ವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ ಎಂಬ ಸಹಕಾರಿ ತತ್ವದಡಿ ರಾಜ್ಯ ಅಭಿವೃದ್ಧಿಯಾಗುತ್ತಿದೆ. ರೈತರ ಬೆಳವಣಿಗೆಗೆ ಸಹಕಾರ ಇಲಾಖೆ ಕಾರ್ಯ ನಿರ್ವಹಿಸಬೇಕು. ಶೇ.60ರಷ್ಟು ಜನ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದು, ಗ್ರಾಮದ ಜನರಿಗೆ ಅಗತ್ಯ ಸೌಲಭ್ಯಗಳನ್ನು ಸಹಕಾರಿ ಸಂಘಗಳ ಮೂಲಕ ನೀಡಲಾಗುತ್ತಿದೆ ಎಂದರು.
2023ರಲ್ಲಿ ‘ಸಹಕಾರ ಸಮೃದ್ಧಿ ಸೌಧ’ ಕಟ್ಟಡಕ್ಕೆ ಭೂಮಿ ಪೂಜೆಯನ್ನು ತಾವೇ ನೆರವೇರಿಸಿದ್ದು, ಮೂರು ವರ್ಷಗಳಲ್ಲಿ 19.43 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎನ್ನುವುದು ಸಂತಸದ ವಿಚಾರ. ನೆಹರೂ ಅವರು ಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ಒಂದು ಊರಿನಲ್ಲಿ ಒಂದು ಶಾಲೆ, ಪಂಚಾಯತಿ ಮತ್ತು ಸಹಕಾರ ಸಂಘ ಇರಲೇಬೇಕು. ಆಗ ಮಾತ್ರ ಆ ಊರಿನ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದಿದ್ದರು. ಪ್ರಸ್ತುತ ಹಾಲಿನ ಸೊಸೈಟಿಗಳಾದ ನಂತರ ಪ್ರತಿ ಊರಿನಲ್ಲಿ ಇದು ಸಾಧ್ಯವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಹಾಲಿನ ಸೊಸೈಟಿಗಳು ಬಂದ ನಂತರ ರೈತರ ಪರಿಸ್ಥಿತಿ ಉತ್ತಮವಾಗಿದ್ದು ಒಂದು ಕೋಟಿ ಲೀಟರ್ ಹಾಲು ದಿನವೊಂದಕ್ಕೆ ಉತ್ಪಾದನೆಯಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಬೇಕು. ಅತ್ಯಂತ ಲಾಭದಾಯಕವಾದ ಉಪಕಸುಬಾಗಿ ಸಹಕಾರ ಕ್ಷೇತ್ರದಿಂದ ಸಾಧ್ಯವಾಗಿದೆ. ಹಿಂದೆ ತಾವು ಸಹಕಾರ ಸಚಿವರಾಗಿದ್ದ ಸಂದರ್ಭದಲ್ಲಿ ಹಾಲು ಒಕ್ಕೂಟಗಳನ್ನು ಹಾಲು ಡೈರಿಯೊಂದಿಗೆ ಸೇರ್ಪಡೆ ಮಾಡಲಾಯಿತು. ಇದರಿಂದ ಹಾಲು ಉತ್ಪಾದನೆ ಹೆಚ್ಚಾಗಲು ಸಾಧ್ಯವಾಯಿತು ಎಂದು ಸಿದ್ದರಾಮಯ್ಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ್, ಶಾಸಕ ರಿಝ್ವಾನ್ ಅರ್ಶದ್, ವಿಧಾನ ಪರಿಷತ್ ಸದಸ್ಯೆ ಬಿಲ್ಕಿಸ್ ಬಾನು, ಸಹಕಾರ ಇಲಾಖೆ ಕಾರ್ಯದರ್ಶಿ, ಇಲಾಖೆಯ ನಿಬಂಧಕರು ಉಪಸ್ಥಿತರಿದ್ದರು.