ಜಿಬಿಎ ಅಧಿಕಾರಿ-ನೌಕರರ 29 ಬೇಡಿಕೆ ಈಡೇರಿಕೆಗಾಗಿ ಆಗ್ರಹ | ಸಾಮೂಹಿಕ ರಜೆ ಹಾಕಿ ನೂರಾರು ಸಿಬ್ಬಂದಿಗಳಿಂದ ಪ್ರತಿಭಟನಾ ಸಭೆ : ಸರಕಾರ ಸ್ಪಂದಿಸದಿದ್ದರೆ ಪಂಚ ಪಾಲಿಕೆ ಬಂದ್ ಎಚ್ಚರಿಕೆ
ಬೆಂಗಳೂರು : ನಗರದ ಪುರಭವನದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 29 ಬೇಡಿಕೆಗಳ ಈಡೇರಿಕೆಗಾಗಿ ಸೋಮವಾರ ಸಾಮೂಹಿಕ ರಜೆ ಹಾಕಿ ನೂರಾರು ಅಧಿಕಾರಿ-ಸಿಬ್ಬಂದಿ ಬೃಹತ್ ಪ್ರತಿಭಟನಾ ಸಭೆಯನ್ನು ನಡೆಸಿದ್ದಾರೆ.
ಈ ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎ.ಅಮೃತ್‍ರಾಜ್, ಕಂದಾಯ ವಿಭಾಗದಲ್ಲಿ ದಿನಕ್ಕೊಂದು ಕಾನೂನು ರೂಪಿಸಿ ಅಧಿಕಾರಿ, ನೌಕರರನ್ನು ಮಾನಸಿಕವಾಗಿ ಹಿಂಸೆ ನೀಡಿ, ಅಮಾನತು ಮಾಡುತ್ತಿದ್ದಾರೆ. ಒತ್ತಡ ಕೆಲಸದಿಂದ 15ಕ್ಕೂ ನೌಕರರು ಮೃತಪಟ್ಟಿದ್ದಾರೆ ಎಂದು ಸರಕಾರವನ್ನು ದೂರಿದರು.
ಮುಂಬಾಯಿ ಮಹಾನಗರ ಪಾಲಿಕೆಯಲ್ಲಿ 1ಲಕ್ಷದ 50ಸಾವಿರ ಅಧಿಕಾರಿ, ಸಿಬ್ಬಂದಿಗಳು ಇದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 3000 ಅಧಿಕಾರಿ, ನೌಕರರು, 10ಸಾವಿರ ಪೌರ ಕಾರ್ಮಿಕರು ಇದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿ, ನೌಕರರು ಜನಗಣತಿ, ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ರಾಜ್ಯ ಸರಕಾರವು ಐದು ನಗರ ಪಾಲಿಕೆಗಳಲ್ಲಿ ಖಾಲಿ ಇರುವ ಸುಮಾರು 3,800 ಹುದ್ದೆಗಳನ್ನು ಭರ್ತಿ ಮಾಡಿ ಒತ್ತಡ ಕಡಿಮೆ ಮಾಡಬೇಕು. ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಜಾರಿಗೆ ತರಲು ಒತ್ತಾಯ ಬಡ್ತಿ, ವರ್ಗಾವಣೆ, ವೇತನ ಮತ್ತು ಸೇವಾ ಸೌಲಭ್ಯಗಳ ಸಮಸ್ಯೆ ಪರಿಹರಿಸಬೇಕು. ಅಮಾನತುಗೊಂಡ ಅಧಿಕಾರಿ, ನೌಕರರ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಎ.ಅಮೃತ್‍ರಾಜ್ ಒತ್ತಾಯಿಸಿದರು.
ನಮ್ಮ ಬೇಡಿಕೆಗಳಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರು ಸ್ಪಂದಿಸಿದ್ದು, ತಮ್ಮ ಎಲ್ಲ ಬೇಡಿಕೆಗಳು ಸಮರ್ಪಕವಾಗಿ ಚರ್ಚೆ ಮಾಡಿ ಬಗೆಹರಿಸೋಣ ಎಂದು ಭರವಸೆ ನೀಡಿದ್ದಾರೆ. ನಮ್ಮ ಬೇಡಿಕೆಗಳು ಈಡೇರಿಸದೇ ಹೋದರೆ ಪಂಚಪಾಲಿಕೆ ಬಂದ್ ಮಾಡಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಎ.ಅಮೃತ್‍ರಾಜ್ ಎಚ್ಚರಿಸಿದರು.
ಪ್ರತಿಭಟನಾ ಸಭೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ಕಂದಾಯ, ಆರೋಗ್ಯ, ತೋಟಗಾರಿಕೆ, ಇಂಜನಿಯರಿಂಗ್ ವಿಭಾಗದ ಅಧಿಕಾರಿಗಳು, ನೌಕರರು ಪಾಲ್ಗೊಂಡಿದ್ದರು.