ಮುಸ್ಲಿಮ್ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಮನೆ ನೀಡಲು ನಿರಾಕರಣೆ: ಟೆಕ್ಕಿ ಆರೋಪದ ಪೋಸ್ಟ್ ಹೈಡ್ ಮಾಡಿದ X !
"ನಾಲ್ವರು ಮನೆ ಮಾಲಕರು ಫ್ಲ್ಯಾಟ್ ಬಾಡಿಗೆಗೆ ನೀಡಲಿಲ್ಲ"
ಬೆಂಗಳೂರು: ಮುಸ್ಲಿಮ್ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ನಾಲ್ವರು ಫ್ಲ್ಯಾಟ್ ಮಾಲಕರು ತನಗೆ ಮನೆ ಬಾಡಿಗೆಗೆ ನೀಡಲು ನಿರಾಕರಿಸಿದ್ದಾರೆ ಎಂದು ಸಾಫ್ಟ್ ವೇರ್ ಇಂಜಿನಿಯರ್ ಫಾರಿಸ್ ಅನ್ಸಾರಿ ಆರೋಪಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸುಮಾರು 24 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ.
ಕುಟುಂಬದೊಂದಿಗೆ ವಾಸಿಸಲು ಬೆಂಗಳೂರಿನಲ್ಲಿ ಫ್ಲ್ಯಾಟ್ ಹುಡುಕುತ್ತಿದ್ದಾಗ ಈ ಅನುಭವ ಎದುರಾಯಿತು ಎಂದು ಫಾರಿಸ್ ಅನ್ಸಾರಿ ತಿಳಿಸಿದ್ದಾರೆ.
‘ಬೆಂಗಳೂರಿನಲ್ಲಿ ಕುಟುಂಬದೊಂದಿಗೆ ವಾಸಿಸಲು ಫ್ಲ್ಯಾಟ್ ಹುಡುಕುತ್ತಿದ್ದೆ. ಈ ಸಂದರ್ಭದಲ್ಲಿ ಮುಸ್ಲಿಮ್ ಎಂಬ ಕಾರಣಕ್ಕೆ ನಾಲ್ವರು ಫ್ಲ್ಯಾಟ್ ಮಾಲಕರು ಮನೆ ಬಾಡಿಗೆಗೆ ನೀಡಲು ನಿರಾಕರಿಸಿದರು. ಆರಂಭದಲ್ಲಿ ಇದೊಂದು ಅಪರೂಪದ ಘಟನೆ ಎಂದು ಭಾವಿಸಿದ್ದೆ. ಆದರೆ, ನಂತರವೂ ಇಂತಹ ಅನುಭವಗಳು ಎದುರಾದವು. ಇದರಿಂದ ನನ್ನ ಆರಂಭಿಕ ನಂಬಿಕೆ ತಪ್ಪು ಎಂಬುದು ಅರಿವಾಯಿತು’ ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದರು.
ಈ ಪೋಸ್ಟ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಇದು ಕೇವಲ ಪ್ರಚಾರಗಳಿಸುವ ತಂತ್ರ ಎಂದು ಟೀಕಿಸಿದರೆ, ಇನ್ನು ಕೆಲವರು ಮುಸ್ಲಿಮ್ ಮಾಲಕರು ಇರುವ ಫ್ಲ್ಯಾಟ್ ಹುಡುಕುವಂತೆ ಸಲಹೆ ನೀಡಿದ್ದಾರೆ.
ಈ ವಿಷಯ ವ್ಯಾಪಕ ಚರ್ಚೆಗೆ ಕಾರಣವಾದ ಬೆನ್ನಲ್ಲೇ 'ಎಕ್ಸ್', ಫಾರಿಸ್ ಅನ್ಸಾರಿ ಅವರ ಮೂಲ ಪೋಸ್ಟ್ ಅನ್ನು ಹೈಡ್ ಮಾಡಿದೆ.
ನಂತರ ಮತ್ತೊಂದು ಪೋಸ್ಟ್ ಪ್ರಕಟಿಸಿದ ಅವರು, ಮನೆ ಹುಡುಕುವಾಗ ಎದುರಾದ ಸಮಸ್ಯೆ ಇಷ್ಟೊಂದು ಪ್ರಚಾರ ಪಡೆಯುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.
‘ಧರ್ಮದ ಕಾರಣಕ್ಕೆ ನಾಲ್ಕು ಬಾರಿ ಮನೆ ನಿರಾಕರಿಸಿದಾಗ ಹತಾಶೆಯಿಂದ ಈ ಬಗ್ಗೆ ಪೋಸ್ಟ್ ಮಾಡಿದ್ದೆ. ಯಾರ ಸಹಾನುಭೂತಿಯನ್ನೂ ಗಳಿಸುವ ಉದ್ದೇಶ ನನಗಿರಲಿಲ್ಲ. ಅದರ ಅಗತ್ಯವೂ ಇಲ್ಲ. ಮನೆ ಹುಡುಕುವ ಪ್ರಯತ್ನ ಮುಂದುವರಿಸುತ್ತೇನೆ. ಖಂಡಿತವಾಗಿಯೂ ನಮಗೆ ಸೂಕ್ತವಾದ ಮನೆ ಸಿಗುತ್ತದೆ’ ಎಂದು ಅವರು ತಿಳಿಸಿದ್ದಾರೆ.