ಸಾಂದರ್ಭಿಕ ಚಿತ್ರ | PC : Image by magnific

ಬೆಂಗಳೂರು : ವಿಜಯಪುರ ಜಿಲ್ಲೆ ಇಂಡಿ ಕ್ಷೇತ್ರದ ಯಶವಂತರಾಯಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಬೆನ್ನಲ್ಲೆ ರಾಜ್ಯ ಸರಕಾರ ಇಂಡಿ ಮತ್ತು ಚಡಚಣ ಸೇರಿದಂತೆ ಒಟ್ಟು 10 ಜಿಲ್ಲೆಗಳ 29 ತಾಲೂಕುಗಳನ್ನು ಬರ ಪೀಡಿತ ವಾಸ್ತವ ಸ್ಥಿತಿ ಅಧ್ಯಯನ ಪಟ್ಟಿಗೆ ಸೇರ್ಪಡೆ ಮಾಡಿದ್ದು, ರಾಜ್ಯದ ಒಟ್ಟು 206 ತಾಲೂಕುಗಳನ್ನು ಬರ ಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿದೆ.

ಗುರುವಾರ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಕಂದಾಯ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ರಾಜ್ಯದಲ್ಲಿ ಬರ ಪರಿಸ್ಥಿತಿಯ ವೈಜ್ಞಾನಿಕ ಮೌಲ್ಯಮಾಪನ ನಿರಂತರವಾಗಿ ನಡೆಯುತ್ತಿದ್ದು, ಈವರೆಗೆ 177 ತಾಲೂಕುಗಳನ್ನು ‘ಬರಪೀಡಿತ’ ಎಂದು ಘೋಷಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ, ಮಳೆ ಪ್ರಮಾಣ, ಮಣ್ಣಿನ ತೇವಾಂಶ, ಬೆಳೆ ಸ್ಥಿತಿ ಸೇರಿದಂತೆ ವಿವಿಧ ವೈಜ್ಞಾನಿಕ ಮಾನದಂಡಗಳನ್ನು ಆಧರಿಸಿ 5ನೇ ಹಂತದಲ್ಲಿ 10 ಜಿಲ್ಲೆಗಳ 29 ತಾಲೂಕುಗಳು ವಾಸ್ತವ ಪರಿಸ್ಥಿತಿ ಅಧ್ಯಯನಕ್ಕೆ ಅರ್ಹತೆ ಪಡೆದಿವೆ ಎಂದು ಹೇಳಿದ್ದಾರೆ.

‘ಈ ತಾಲೂಕುಗಳಲ್ಲಿ ವೈಜ್ಞಾನಿಕ ಪರಿಶೀಲನೆ ನಡೆಸಿ, ಪಾರದರ್ಶಕ ಸಮೀಕ್ಷೆ ಹಾಗೂ ನಿಖರ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ತಿಳಿಸಿದ್ದಾರೆ. ಬರ ಪೀಡಿತ ಪಟ್ಟಿಯಲ್ಲಿ ಇಂಡಿ ಹಾಗೂ ಚಡಚಣ ತಾಲೂಕು ಸೇರ್ಪಡೆ ಮಾಡಿಲ್ಲ ಎಂಬ ಕಾರಣಕ್ಕಾಗಿ ಯಶವಂತರಾಯಗೌಡ ಪಾಟೀಲ್, ಸ್ಪೀಕರ್ ಜಿ.ಎಸ್.ಪಾಟೀಲ್ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ವಾಸ್ತವ ಸ್ಥಿತಿ ಅಧ್ಯಯನಕ್ಕೆ ಸೇರ್ಪಡೆಯಾದ ತಾಲೂಕುಗಳು: ಔರಾದ್, ಗೋಕಾಕ್, ರಾಮದುರ್ಗ, ಸವದತ್ತಿ, ಕಾಗವಾಡ, ಇಂಡಿ, ಚಡಚಣ, ಧಾರವಾಡ, ಕಲಘಟಗಿ, ಕುಂದಗೋಳ, ಅಳ್ನಾವರ, ಶಿಕಾರಿಪುರ, ಶಿವಮೊಗ್ಗ, ಭದ್ರಾವತಿ, ಸೊರಬ, ತೀರ್ಥಹಳ್ಳಿ, ಚಿಕ್ಕಮಗಳೂರು, ಕಳಸ, ಮಡಿಕೇರಿ, ಕುಶಾಲನಗರ, ಬೆಳ್ತಂಗಡಿ, ಬಂಟ್ವಾಳ, ಉಳ್ಳಾಲ, ಉಡುಪಿ, ಬೈಂದೂರು, ಅಂಕೋಲಾ, ಭಟ್ಕಳ, ಹಳಿಯಾಳ, ಶಿರಸಿ ತಾಲೂಕನ್ನು ಸೇರ್ಪಡೆ ಮಾಡಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor