ರಣದೀಪ್ ಸಿಂಗ್ ಸುರ್ಜೆವಾಲಾ (Photo: PTI)

ಬೆಂಗಳೂರು : ‘ಚುನಾವಣಾ ಆಯೋಗದೊಳಗಿನ ಬಂಡಾಯದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು. ಮತದಾರರ ಹೆಸರುಗಳನ್ನು ತೆಗೆದುಹಾಕಲು ಅನುಮತಿಸಬಾರದು’ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆಗ್ರಹಿಸಿದ್ದಾರೆ.

ಗುರುವಾರ ಪ್ರಕಟಣೆ ನೀಡಿರುವ ಅವರು, ಎಸ್‍ಐಆರ್ ವಿಷಯದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನ್ಯಾಯಾಲಯವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಗೆ ಆದೇಶಿಸಬೇಕು. 2025ರ ಜೂನ್‍ನಿಂದ 13 ಕೋಟಿ ಮತದಾರರ ಹೆಸರುಗಳನ್ನು ತೆಗೆದುಹಾಕಿರುವುದನ್ನು ಮರು ಪರಿಶೀಲಿಸಬೇಕು, ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ ಅರ್ಹ ಮತದಾರನ ಹೆಸರನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೂಡಲೇ ವಜಾಗೊಳಿಸಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಎಸಗಿದ ಉಲ್ಲಂಘನೆಗಳಿಗಾಗಿ ಅವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು. ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಚರ್ಚಿಸಲು ತಕ್ಷಣವೇ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಬೇಕು. ಅಲ್ಲದೆ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಹೊಸ ಚುನಾವಣೆಗಳನ್ನು ನಡೆಸುವ ಬಗ್ಗೆ ಚರ್ಚೆಯಾಗಬೇಕು ಎಂದು ಅವರು ಕೋರಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕಿದ ನಂತರ ನಡೆದ ಚುನಾವಣೆಗಳನ್ನು ಕೇವಲ ಪರಿಶೀಲನೆಗೆ ಹೊರತಾದದ್ದು ಎಂದು ಪರಿಗಣಿಸಲು ಸಾಧ್ಯವಿಲ್ಲ. ಪ್ರಜಾಸತ್ತಾತ್ಮಕ ಜನಾದೇಶವು ಕಾನೂನುಬದ್ಧ ಮತ್ತು ಸಮಗ್ರ ಮತದಾರರ ಪಟ್ಟಿಯನ್ನು ಆಧರಿಸಿರಬೇಕು. ಮತದಾನದ ಹಕ್ಕು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಮತದಾರರ ಪಟ್ಟಿಯನ್ನು ದುರುಪಯೋಗಪಡಿಸಿಕೊಂಡಾಗ, ಪ್ರಜಾಪ್ರಭುತ್ವವನ್ನೇ ದುರುಪಯೋಗಪಡಿಸಿಕೊಂಡಂತಾಗುತ್ತದೆ ಎಂದು ಅವರು ಗಮನ ಸೆಳೆದಿದ್ದಾರೆ.

ಚು.ಆಯೋಗವನ್ನು ವಶಪಡಿಸಿಕೊಳ್ಳಲು ಬಿಜೆಪಿಗೆ ಅವಕಾಶ ನೀಡಲಾಗುವುದಿಲ್ಲ, ಮತದಾರರ ಪಟ್ಟಿಯನ್ನು ವಶಪಡಿಸಿಕೊಳ್ಳಲು ಜ್ಞಾನೇಶ್ ಕುಮಾರ್‍ಗೆ ಅವಕಾಶ ನೀಡಲಾಗುವುದಿಲ್ಲ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ನಿರುಪಯುಕ್ತ ಎಂದು ಪರಿಗಣಿಸಲು ಸಾಧ್ಯವಿಲ್ಲ. ಕೇವಲ ಮತದಾರರಪಟ್ಟಿಯ ವಿಷಯವಲ್ಲ. ಇದು ಪ್ರಜಾಪ್ರಭುತ್ವ ಉಳಿಸುವ ವಿಷಯವಾಗಿದೆ ಎಂದು ಸುರ್ಜೇವಾಲಾ ತಿಳಿಸಿದ್ದಾರೆ.

 

. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor