Bengaluru | ನಕಲಿ ಔಷಧಿ ಜಾಲ ಪತ್ತೆ: 4.91 ಕೋಟಿ ರೂ. ಮೌಲ್ಯದ ಸೊತ್ತು ವಶ; ಓರ್ವನ ಬಂಧನ
ನಕಲಿ ಔಷಧಿಗಳನ್ನು ಅಂತಾರಾಷ್ಟ್ರೀಯ ಔಷಧ ಕಂಪೆನಿಯ ಹೆಸರಿನಲ್ಲಿ ಲೇಬಲ್ ಹಚ್ಚಿ ಮಾರಾಟ ಮಾಡುತ್ತಿರುವುದು ಪತ್ತೆ: ಸಚಿವ ಖಾದರ್
ನಕಲಿ ಔಷಧಿ ಜಾಲದ ಬಗ್ಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೆಂಗಳೂರು: ರಾಮನಗರದ ಬಿಡದಿಯ ಫಾರ್ಮ್ ಹೌಸ್ ವೊಂದರಲ್ಲಿ ನಡೆಯುತ್ತಿದ್ದ ಪರವಾನಿಗೆರಹಿತ ನಕಲಿ ಔಷಧಿ ಮರು-ಪ್ಯಾಕಿಂಗ್ ಮತ್ತು ಲೇಬಲಿಂಗ್ ಜಾಲವನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (FDA)ಯ ಔಷಧ ಅಮಲುಜಾರಿ ವಿಭಾಗದ ಅಧಿಕಾರಿಗಳ ತಂಡ ಪತ್ತೆ ಹಚ್ಚಿದೆ. ಈ ಸಂಬಂಧ 4.91 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್, ಖಚಿತ ಮಾಹಿತಿಯನ್ನು ಆಧರಿಸಿ ಆಗಸ್ಟ್ 18ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯ ಕುರುಬರಕೇರನ ಹಳ್ಳಿ (ನಂ. 34) ಇಲ್ಲಿನ ಫಾರ್ಮ್ ಹೌಸ್ ವೊಂದಕ್ಕೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಔಷಧ ಅಮಲು ಜಾರಿ ವಿಭಾಗದ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿದೆ. ಈ ವೇಳೆ ಕಾನೂನುಬಾಹಿರವಾಗಿ ಅಂತಾರಾಷ್ಟ್ರೀಯ ಔಷಧ ಕಂಪೆನಿಯ ಹೆಸರಿನಲ್ಲಿ ಮರು-ಪ್ಯಾಕಿಂಗ್ ಮತ್ತು ಲೇಬಲಿಂಗ್ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.
ಈ ನಕಲಿ ಔಷಧ ಜಾಲ ಕಾರ್ಯಾಚರಿಸುತ್ತಿದ್ದ ಫಾರ್ಮ್ ಹೌಸ್ ಸಿದ್ದಯ್ಯ ಎಂಬವರಿಗೆ ಸೇರಿದ್ದಾಗಿದೆ. ಇದನ್ನು ದುಬೈಯಲ್ಲಿರುವ ಬೆಂಗಳೂರು ಮೂಲದ ಪ್ರಶಾಂತ್ ಎಂಬವರು ಲೀಸ್ ಗೆ ಪಡೆದಿರುವುದು ತಿಳಿದುಬಂದಿದೆ. ಪ್ರಶಾಂತ್ ಸಂಬಂಧಿಕ ತೇಜಸ್ ಎಂಬಾತ ಇದನ್ನು ನೋಡಿಕೊಳ್ಳುತ್ತಿದ್ದ. ಪ್ರಕರಣಕ್ಕೆ ಸಂಬಂಧಿಸಿ ಪ್ರಭುದೇವ ಗೌಡ ಎಂಬಾತನನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇತರ ರಾಜ್ಯಗಳಿಂದ ಕಡಿಮೆ ಬೆಲೆಯ ಔಷಧಿಗಳನ್ನು ತಂದು, ಅವುಗಳನ್ನು ಹೊಸ ಬಾಟಲಿಗಳಿಗೆ (Vials) ತುಂಬಿಸಿ, ದುಬಾರಿ ಬಹುರಾಷ್ಟ್ರೀಯ ಕಂಪೆನಿ(MNC) ಗಳ ಹಾಗೂ ಆಮದು ಮಾಡಿಕೊಂಡ ಬ್ರಾಂಡ್ ಗಳ ಹೆಸರಿನ ನಕಲಿ ಲೇಬಲ್ ಹಚ್ಚಿ ಮಾರಾಟ ಮಾಡುತ್ತಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಸಚಿವರು ತಿಳಿಸಿದರು.
ನಕಲಿ ಔಷಧಿಗಳಲ್ಲಿ ಯಾವುದೇ ಸಕ್ರಿಯ ಔಷಧ ಇರುವುದಿಲ್ಲ, ತಪ್ಪು ಪದಾರ್ಥಗಳು ಅಥವಾ ಹಾನಿಕಾರಕ ಪದಾರ್ಥಗಳು ಇರುತ್ತವೆ. ಈ ಉದ್ದೇಶಕ್ಕಾಗಿ ಬಳಸಲಾದ ಲೇಬಲ್‌ನಲ್ಲಿ ಸ್ಕ್ಯಾನಿಂಗ್ ಕೋಡ್ ಗಳು ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಸಚಿವರು ಹೇಳಿದರು.
ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಇದು ರಾಷ್ಟ್ರ ಮಟ್ಟಕ್ಕೆ ವ್ಯಾಪಿಸಿರುವ ಜಾಲ. ಹಿಮಾಚಲ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ನಕಲಿ ಔಷಧಿಗಳನ್ನು ತಯಾರಿಸಿ, ಅವುಗಳನ್ನು ಕರ್ನಾಟಕಕ್ಕೆ ತಂದು ಎಂಎನ್ ಸಿ ಲೇಬಲಿಂಗ್ ಹಾಕಿ ಅದನ್ನು ಮೆಡಿಕಲ್, ಆಸ್ಪತ್ರೆಗಳಿಗೆ ವಿತರಿಸಲಾಗುತ್ತಿರುವುದು ಪತ್ತೆಯಾಗಿದೆ. ಆಸ್ಪತ್ರೆಯ ತುರ್ತು ನಿಗಾ ಘಟಕ (ಐಸಿಯು)ದಲ್ಲಿ ಉಪಯೋಗ ಆಗುವಂತಹ ಔಷಧಿಗಳನ್ನೂ ನಕಲಿಯಾಗಿ ತಯಾರಿಸಿ ನಕಲಿ ಲೇಬಲ್ ಮಾಡಿರುವುದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.
ಸದ್ಯ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಡ್ರಗ್ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಈ ಜಾಲದ ಬಗ್ಗೆ ತೆಲಂಗಾಣ, ಹಿಮಾಚಲ ಪ್ರದೇಶದ ಸರಕಾರಗಳಿಗೂ ಮಾಹಿತಿ ನೀಡುತ್ತೇವೆ ಎಂದು ಯು.ಟಿ.ಖಾದರ್ ಹೇಳಿದರು..
ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆಯಾಗಬೇಕಿದೆ. ಈ ಬಗ್ಗೆ ರಾಜ್ಯ ಗೃಹ ಸಚಿವರ ಜೊತೆ ಚರ್ಚಿಸುತ್ತೇನೆ ಎಂದು ಸಚಿವರು ತಿಳಿಸಿದರು.
ನಕಲಿ ಔಷಧ ಮಾರಾಟ ತಡೆಗೆ ಕ್ರಮ
ವಶಪಡಿಸಿಕೊಳ್ಳಲಾದ ಔಷಧಿಗಳ ಬ್ಯಾಚ್ ಯಾವುದೇ ರೀತಿಯ ಮಾರಾಟ ಅಥವಾ ವಿತರಣೆಯನ್ನು ತಡೆಯಲು ಅವುಗಳ ಬ್ಯಾಚ್ ಸಂಖ್ಯೆಗಳನ್ನು ಇಲಾಖೆಯ FDA ಪೋರ್ಟಲ್ ನಲ್ಲಿ ತಕ್ಷಣವೇ ಬ್ಲಾಕ್ ಮಾಡಲಾಗಿದೆ. ವಶಪಡಿಸಿಕೊಂಡ ಔಷಧಿಗಳ ರಾಸಾಯನಿಕ ಸಂಯೋಜನೆ, ಶುದ್ಧತೆ ಮತ್ತು ತೀವ್ರತೆಯನ್ನು ಪರೀಕ್ಷಿಸಲು ಮಾದರಿಗಳನ್ನು ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸಚಿವರು ತಿಳಿಸಿದರು.