Karnataka SIR | 'ಫಾರಂ-7' ಮೂಲಕ ಮುಸ್ಲಿಮ್ ಮತದಾರರ ಹೆಸರು ಅಳಿಸಲು ಯತ್ನಿಸಿದ ಆರೋಪ: ಬಿಜೆಪಿ ಶಾಸಕನ ವಿರುದ್ಧ ತನಿಖೆಗೆ ಹೈಕೋರ್ಟ್ ಅನುಮತಿ
ಹೊಸದಿಲ್ಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(SIR) ಪ್ರಕ್ರಿಯೆಯ ವೇಳೆ ಆರು ಮುಸ್ಲಿಮ್ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸುವ ಉದ್ದೇಶದಿಂದ ನಕಲಿ 'ಫಾರಂ-7' ಅರ್ಜಿಗಳನ್ನು ಸಲ್ಲಿಸಿದ ಆರೋಪಕ್ಕೆ ಸಂಬಂಧಿಸಿ ಜಯನಗರದ ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ ಸೇರಿದಂತೆ ನಾಲ್ವರ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆ ಮುಂದುವರಿಸಲು ಕರ್ನಾಟಕ ಹೈಕೋರ್ಟ್ ಪೊಲೀಸರಿಗೆ ಅನುಮತಿ ನೀಡಿದೆ ಎಂದು barandbench.com ವರದಿ ಮಾಡಿದೆ.
ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ರಾಮಕೃಷ್ಣ ಮತ್ತು ಇತರ ಮೂವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ ಹೆಗ್ಡೆ ಈ ಆದೇಶ ನೀಡಿದ್ದಾರೆ. ಆದರೆ, ನ್ಯಾಯಾಲಯದ ಅನುಮತಿಯಿಲ್ಲದೆ ಅರ್ಜಿದಾರರನ್ನು ಬಂಧಿಸಬಾರದು ಮತ್ತು ಆರೋಪ ಪಟ್ಟಿ ಸಲ್ಲಿಸಬಾರದು ಎಂದು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ಅಕ್ಟೋಬರ್ 7ರಂದು ರಾಮಮೂರ್ತಿ ಸೇರಿದಂತೆ ನಾಲ್ವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ, 1950ರ ಸೆಕ್ಷನ್ 31, ಸೆಕ್ಷನ್ 217 (ಬಿ) ಮತ್ತು ಸೆಕ್ಷನ್ 3 (5), ಮತ್ತು ಭಾರತೀಯ ನ್ಯಾಯ ಸಂಹಿತೆ(BNS) 2023ರ ಸೆಕ್ಷನ್ 336(2), 340(2) ಮತ್ತು 61(2)ರಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ದೂರುದಾರ ತೆಹ್ರಾನ್ ಅಲಿ ಖಾನ್, ''ನನ್ನ ಮತ್ತು ನನ್ನ ಕುಟುಂಬದ ಐವರು ಸದಸ್ಯರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸುವಂತೆ ಕೋರಿ ನಕಲಿ ಫಾರಂ-7 ಅರ್ಜಿಗಳನ್ನು ಸಲ್ಲಿಸಲಾಗಿದೆ. ಆದರೆ ನಾನು ಮತ್ತು ನನ್ನ ಕುಟುಂಬದ ಸದಸ್ಯರು ಸುಮಾರು 50 ವರ್ಷಗಳಿಂದ ಬೆಂಗಳೂರಿನ ಓಲ್ಡ್ ಗುರಪ್ಪನಪಾಳ್ಯದಲ್ಲಿ ವಾಸಿಸುತ್ತಿದ್ದು, ಮತದಾನದ ಹಕ್ಕು ಹೊಂದಿದ್ದೇವೆ'' ಎಂದು ಹೇಳಿದ್ದರು.
ಅಕ್ಟೋಬರ್ 5ರಂದು ರಾಮಕೃಷ್ಣ ಎಂಬವರನ್ನು ಸಂಪರ್ಕಿಸಿದ್ದಾಗಿ ತೆಹ್ರಾನ್ ಅಲಿ ಖಾನ್ ಹೇಳಿದ್ದಾರೆ. ಈ ವೇಳೆ, ರಾಮಮೂರ್ತಿ ಅವರ ಕಚೇರಿಯಲ್ಲಿ ರವಿ ಎಂಬ ವ್ಯಕ್ತಿ ನೀಡಿದ್ದ ಫಾರಂ-7 ಅರ್ಜಿಗೆ ನಾನು ಸಹಿ ಹಾಕಿರುವುದಾಗಿ ರಾಮಕೃಷ್ಣ ತಿಳಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಬಳಿಕ ರಾಮಕೃಷ್ಣ ಅವರು ಶಾಸಕರೊಂದಿಗೆ ಕಾನ್ಫರೆನ್ಸ್ ಕರೆಯಲ್ಲಿ ಮಾತನಾಡಿದ್ದರು. ಈ ವೇಳೆ ಫಾರಂ-7 ಅರ್ಜಿ ಸಲ್ಲಿಸಿರುವುದನ್ನು ಶಾಸಕರು ಒಪ್ಪಿಕೊಂಡಿದ್ದರು ಹಾಗೂ ಅದನ್ನು ಹಿಂಪಡೆದು ಸರಿಪಡಿಸುವುದಾಗಿ ಭರವಸೆ ನೀಡಿದ್ದರು ಎಂದು ಆರೋಪಿಸಲಾಗಿದೆ.
ರಾಜ್ಯದಲ್ಲಿ ನಡೆದ SIR ಪ್ರಕ್ರಿಯೆ ವೇಳೆ ಮತದಾರರ ಪಟ್ಟಿಯಿಂದ ಮುಸ್ಲಿಮ್ ಮತದಾರರ ಹೆಸರುಗಳನ್ನು ಅಳಿಸುವ ಉದ್ದೇಶದಿಂದ ಸುಳ್ಳು ಫಾರಂ-7 ಅರ್ಜಿಗಳನ್ನು ಸಲ್ಲಿಸಿದ ಆರೋಪ ಎದುರಿಸುತ್ತಿರುವ 10 ಮಂದಿಯ ವಿರುದ್ಧ ದಾಖಲಾಗಿದ್ದ ಮೂರು ಎಫ್ಐಆರ್ಗಳ ತನಿಖೆಗೆ ಹೈಕೋರ್ಟ್ ನವೆಂಬರ್ 17ರಂದು ತಡೆಯಾಜ್ಞೆ ನೀಡಿತ್ತು. ಆದರೆ, ಪ್ರಸಕ್ತ ಪ್ರಕರಣದಲ್ಲಿ ತನಿಖೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿರುವ ನ್ಯಾಯಾಲಯ, ಪೊಲೀಸರಿಗೆ ತನಿಖೆ ಮುಂದುವರಿಸಲು ಅನುಮತಿ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು 2027ರ ಜನವರಿ 8ಕ್ಕೆ ಮುಂದೂಡಿದೆ.
ಅರ್ಜಿದಾರರ ಪರವಾಗಿ ವಕೀಲರಾದ ಅಯ್ಯಪ್ಪ ಕೆ.ಜಿ. ಮತ್ತು ವಸಂತ ಕುಮಾರ್ ವಾದ ಮಂಡಿಸಿದರು. ರಾಜ್ಯ ಸರಕಾರದ ಪರವಾಗಿ ಹೆಚ್ಚುವರಿ ರಾಜ್ಯ ಸರಕಾರಿ ಅಭಿಯೋಜಕ ಅನೂಪ್ ಕುಮಾರ್ ಹಾಜರಿದ್ದರು.