ಬೆಂಗಳೂರು,: ಇಲ್ಲಿನ ಬಳ್ಳಾರಿ ರಸ್ತೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ ಕಚೇರಿಯಲ್ಲಿನ ಸುದ್ದಿಗೋಷ್ಠಿ ವೇಳೆ ಭಾರೀ ಹೈಡ್ರಾಮಾ ನಡೆದಿದ್ದು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಸ್ಥಾನದಿಂದ ಶಂಕರ್ ಬಿದರಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಹಾಸಭಾದ ಪದಾಧಿಕಾರಿಯೊಬ್ಬರು ಆಗ್ರಹಿಸಿದ ಘಟನೆ ನಡೆದಿದೆ.

ಸುದ್ದಿಗೋಷ್ಠಿ ವೇಳೆ ಎದ್ದು ನಿಂತು ಆಗ್ರಹಿಸಿದ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಹರೀಶ್ ಆರಾಧ್ಯ, ‘ನಮ್ಮ (ವೀರಶೈವ) ಸಮಾಜ ಉಳಿಯಬೇಕಾದರೆ, ನಮ್ಮ ಸಮಾಜದ ಸಂಘಟನೆ ಉಳಿಯಬೇಕಾದರೆ (ಶಂಕರ್ ಬಿದರಿ) ನೀವು ಕೂಡಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಮಾಜ ಸುಧಾರಕ, ಕ್ರಾಂತಿಕಾರಿ ಬಸವಣ್ಣ ಅವರಿಗೋಸ್ಕರ ನಾನು ಪ್ರಾಣ ಬೇಕಾದರೂ ತ್ಯಾಗ ಮಾಡುತ್ತೇನೆ. ಶಂಕರ್ ಬಿದರಿ ಅವರು ವಿವಾದಿತ ‘ಬಸವ ಮಂಟಪ’ ಕೃತಿಯ ಲೇಖಕ ರವಿ ಹಂಜ್‍ಗೆ ವೀರಶೈವ ಮಹಾಸಭಾದ ವತಿಯಿಂದ ಅಭಿನಂದನೆ ಸಲ್ಲಿಸಿರುವುದು ಮಹಾ ಅಪರಾಧ ಎಂದು ಅವರು ವಾಗ್ದಾಳಿ ನಡೆಸಿದರು.

ಶಂಕರ್ ಬಿದರಿ ರಾಜೀನಾಮೆ ನೀಡಬೇಕು ಎಂಬ ಹರೀಶ್ ಆರಾಧ್ಯ ಆಗ್ರಹಕ್ಕೆ ಉಳಿದ ಪದಾಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪದಾಧಿಕಾರಿ ಹುದ್ದೆಯಿಂದ ಹರೀಶ್ ಅವರನ್ನು ಕೂಡಲೇ ಉಚ್ಛಾಟಿಸಲು ತೀರ್ಮಾನ ಕೈಗೊಳ್ಳಲಾಯಿತು. ಈ ವೇಳೆ ಕೆಲಕಾಲ ಪರ-ವಿರೋಧವು ನಡೆದು, ಸುದ್ದಿಗೋಷ್ಠಿಯಲ್ಲಿ ತೀವ್ರ ಗದ್ದಲ ಉಂಟಾಯಿತು.


ರಾಜೀನಾಮೆ ಬಗ್ಗೆ ಹಿರಿಯರು ನಿರ್ಧರಿಸುತ್ತಾರೆ:

‘ರವಿ ಹಂಜ್ ಬರೆದಿರುವ ‘ಬಸವ ಮಂಟಪ’ ಕೃತಿಯನ್ನು ಓದಿರಲಿಲ್ಲ. ಹೀಗಾಗಿ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಎಂ.ಬಿ.ಪಾಟೀಲ್ ಅವರು ನನಗೆ ಆಧುನಿಕ ಕೊಂಡಿ ಮಂಚಣ್ಣ ಎಂಬ ಪದ ಬಳಸಿರುವುದು ವೈಯಕ್ತಿಕವಾಗಿ ನೋವಾಗಿದೆ. ಚಿಕ್ಕಂದಿನಿಂದ ಬಸವಣ್ಣ ಅವರ ಬಗ್ಗೆ ಅಪಾರ ಭಕ್ತಿ ಮತ್ತು ಗೌರವ ಹೊಂದಿದ್ದೇನೆ.

ನಾನು ಸಾಕಷ್ಟು ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇನೆ. ಬಸವ ಪರಂಪರೆಗೆ ಆಪತ್ತು ಎದುರಾದಾಗೆಲ್ಲ ವೈಯಕ್ತಿಕವಾಗಿ ಹಾಗೂ ಪೊಲೀಸ್ ಅಧಿಕಾರಿಯಾಗಿಯೂ ಸಾಕಷ್ಟು ಸೇವೆಯನ್ನು ಮಾಡಿದ್ದೇನೆ. ಹೀಗಿರುವಾಗ ನನ್ನನ್ನು ನಿಂದಿಸಿರುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ನನ್ನ ರಾಜೀನಾಮೆ ಬಗ್ಗೆ ಹಿರಿಯರು ನಿರ್ಧಾರ ಮಾಡುತ್ತಾರೆ. ನಾನು ತಪ್ಪು ಮಾಡಿದರೆ ಬಸವಣ್ಣ ಶಿಕ್ಷೆ ಕೊಡಲಿ. ಬಸವಣ್ಣನ ಬಗ್ಗೆ ಮಾತನಾಡಿದ್ದು ಹಾಗೂ ಬರೆದಿದ್ದು ಘನಘೋರ ಅಪರಾಧ. ರವಿ ಹಂಜ್‍ಗೆ ಕಠಿಣ ಶಿಕ್ಷೆ ಆಗಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಂಕರ್ ಬಿದರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor