ಸರಕಾರಗಳಿಂದ ಆಂಗ್ಲ ಮಾಧ್ಯಮಕ್ಕೆ ಹೆಚ್ಚು ಪ್ರೋತ್ಸಾಹ : ಶೂದ್ರ ಶ್ರೀನಿವಾಸ್ ಬೇಸರ
17ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಬೆಂಗಳೂರು : ಕನ್ನಡ ಮಾಧ್ಯಮ ಮತ್ತು ಇಂಗ್ಲೀಷ್ ಮಾಧ್ಯಮ ಎರಡೂ ಏಕಕಾಲದಲ್ಲಿ ಬೆಳೆಯಬೇಕಿದೆ. ಆದರೆ, ಇವತ್ತಿನ ಸರಕಾರಗಳು ಆಂಗ್ಲ ಮಾಧ್ಯಮಕ್ಕೆ ಹೆಚ್ಚು ಪ್ರೋತ್ಸಾಹವನ್ನು ನೀಡುತ್ತಿವೆ ಎಂದು 17ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶೂದ್ರ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಚಾಮರಾಜಪೇಟೆಯಲ್ಲಿರುವ ಅಂಬರೀಶ್ ಆಡಿಟೋರಿಯಂನಲ್ಲಿ ನಡೆದ 17ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ಇಂದಿನ ಪರಿಸ್ಥಿತಿಯಲ್ಲಿ ನಿಜವಾಗಿಯೂ ಹೋರಾಟದ ಮೂಲಕದ ಕನ್ನಡವನ್ನು ಉಳಿಸುವ ಅನಿವಾರ್ಯತೆ ಬಂದಿದೆ. ಸರಕಾರ ಕನ್ನಡ ಕಲಿಕೆಗೆ ಹೆಚ್ಚು ಉತ್ತೇಜನ ನೀಡಬೇಕು. ಹೆಚ್ಚೆಚ್ಚು ಅಮೂಲ್ಯ ಪುಸ್ತಕಗಳುಳ್ಳ ಗ್ರಂಥಾಲಯಗಳನ್ನು ಸ್ಥಾಪಿಸಬೇಕು ಎಂದರು.
ಇಂಗ್ಲೀಷ್ ವ್ಯಾಮೋಹ ಕಡಿಮೆಯಾಗಬೇಕೆಂದರೆ ಉದ್ಯೋಗಗಳು ಕನ್ನಡ ಕೇಂದ್ರಿತವಾಗಬೇಕು. ನಮ್ಮ ಅರಿವನ್ನು ಬೆಳೆಸಿಕೊಂಡಾಗ ಮಾತ್ರ ಎಲ್ಲಿ ಬೇಕಾದರೂ ಬೆಳೆಯಬಹುದು ಎಂದು ಶೂದ್ರ ಶ್ರೀನಿವಾಸ್ ತಿಳಿಸಿದರು.
ಕುವೆಂಪು ಸೇರಿದಂತೆ ಹಲವು ಮಹಾನ್ ಕವಿಗಳ, ಲೇಖಕರ ಒಡನಾಡ ಸಿಕ್ಕಿ ನನ್ನ ಬದುಕು ಧನ್ಯವಾಗಿದೆ. ಹಲವಾರು ದೇಶಗಳನ್ನು ಸುತ್ತಿ ಅಲ್ಲಿನ ಕಲೆ, ಸಂಸ್ಕೃತಿ, ಭಾಷೆಯನ್ನು ಕೇಳಿದ್ದೇನೆ, ನೋಡಿದ್ದೇನೆ. ನಮ್ಮ ಕನ್ನಡ ಎಲ್ಲವುಗಳಿಗಿಂತಲೂ ವಿಭಿನ್ನ, ವಿಶೇಷವಾದದು ಎಂದು ಶೂದ್ರ ಶ್ರೀನಿವಾಸ್ ಹೇಳಿದರು.
ಸಂಸ್ಕೃ ತಿ ಚಿಂತಕ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ಕನ್ನಡದ ಒಬ್ಬ ಸಹಜ ಬುದ್ಧಿಜೀವಿಯಾದ ಶೂದ್ರ ಶ್ರೀನಿವಾಸ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಕಸಾಪಕ್ಕೆ ಅಭಿನಂದನೆಗಳು. ಶೂದ್ರ ಶ್ರೀನಿವಾಸ್ ಎಲ್ಲರಿಗೂ ಅಪ್ಯಾಯಮಾನವಾಗಿ ಇಷ್ಟವಾಗುತ್ತಾರೆ ಎಂದರು.
ಕರ್ನಾಟಕದಲ್ಲಿ ನವೋದಯದ ಕಾಲದಿಂದಲೂ ಕನ್ನಡದ ಸಣ್ಣ ಪತ್ರಿಕೆಗಳಿಗೆ ದೊಡ್ಡ ಪರಂಪರೆಯಿದೆ. ಖಾಸಗಿಯವರ ಮ್ಯಾಗಜೀನ್ಗಳಿಗೂ ಕನ್ನಡದ ಸಾಹಿತ್ಯಿಕ ಪತ್ರಿಕೆಗಳಿಗೂ ಅಜಗಜಾಂತರವಾದ ವ್ಯತ್ಯಾಸಗಳಿವೆ. ಕನ್ನಡದಲ್ಲಿ ಅನೇಕ ಕವಿಗಳು ಸಾಹಿತ್ಯಿಕ ಪತ್ರಿಕೆಗಳನ್ನು ಹೊರತಂದಿದ್ದಾರೆ. ಅಂಥಹ ಹಲವು ಪತ್ರಿಕೆಗಳ ಪೈಕಿ ಶೂದ್ರ ಶ್ರೀನಿವಾಸ್ ಅವರು ಹೊರ ತಂದಂತಹ ‘ಶೂದ್ರ’ ಪತ್ರಿಕೆಯು ಅರ್ಥಪೂರ್ಣ ಚಿಂತನೆಗಳನ್ನು ಹುಟ್ಟುಹಾಕಿತು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಬೆಂಗಳೂರು ನಗರ ಜಿಲ್ಲಾ ಕಸಾಪದ ಅಧ್ಯಕ್ಷ ಪ್ರಕಾಶಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಬೆಂಗಳೂರು ನಗರ ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ಡಾ.ಹಂ.ಗು.ರಾಜೇಶ್ ಸಮ್ಮೇಳನದ ನಿರ್ಣಯ ಮಂಡಿಸಿದರು.
ಸಮ್ಮೇಳನದ ನಿರ್ಣಯಗಳು :
► ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮೂರು ಪ್ರಮುಖ ನಿರ್ಣಯಗಳನ್ನು ಮಂಡಿಸಲಾಯಿತು. ಮೊದಲನೆಯದಾಗಿ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಹಂತದ ಶಿಕ್ಷಣದಲ್ಲಿ ಸರಕಾರ ತಂದಿರುವ ದ್ವಿಭಾಷಾ ಮಾಧ್ಯಮ ನೀತಿಯನ್ನು ತೀವ್ರವಾಗಿ ಖಂಡಿಸಲಾಯಿತು. ಮುಂದಿನ ಶೈಕ್ಷಣಿಕ ವರ್ಷದಿಂದಲೇ ದ್ವಿಭಾಷಾ ಮಾಧ್ಯಮ ನೀತಿಯನ್ನು ಹಿಂತೆಗೆದುಕೊಂಡು ಮಾಧ್ಯಮಿಕ ಹಂತದವರೆಗೆ ಕನ್ನಡ ಮಾಧ್ಯಮ/ಮಾತೃಭಾಷೆ ಮಾಧ್ಯಮವೊಂದನ್ನೇ ಜಾರಿಗೆ ತರಬೇಕೆಂದು ಸರಕಾರವನ್ನು ಪ್ರಬಲವಾಗಿ ಒತ್ತಾಯಿಸಲಾಯಿತು.
► ಎರಡನೆಯದಾಗಿ, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸರಕಾರ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಪ್ರತೀ ವರ್ಷ ಕಡ್ಡಾಯವಾಗಿ ಕನ್ನಡಪರ ಹೋರಾಟಗಾರರೊಬ್ಬರಿಗೆ ಕನ್ನಡ ಚಳವಳಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡುವಂತಾಗಬೇಕು ಎಂದು ಒತ್ತಾಯಿಸಲಾಯಿತು.
► ಮೂರನೆಯದಾಗಿ, ಸಹ ಭಾಷಿಕರಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಕಲಿಕೆ ಮತ್ತು ಪರಿಚಯಕ್ಕಾಗಿ ಇರುವ ಯೋಜನೆಗಳ ಜೊತೆಗೆ ವಿಶೇಷ ಯೋಜನೆಗಳನ್ನು ರೂಪಿಸಿ, ಹೆಚ್ಚಿನ ಆರ್ಥಿಕ ನೆರವನ್ನು ಸರಕಾರ ನೀಡಬೇಕು ಎಂದು ಸಮ್ಮೇಳನವು ಒತ್ತಾಯಿಸಿತು.