ಬೆಂಗಳೂರು : ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಶಿವಾಜಿನಗರ ಕ್ಷೇತ್ರದ ಶಾಸಕರಾಗಿರುವ ರಿಝ್ವಾನ್ ಅರ್ಶದ್ ಅವರ ನೇತೃತ್ವದಲ್ಲಿ ಎರಡು ದಿನಗಳ ‘ಹಲಸೂರು ಹಬ್ಬ' ವಿಜೃಂಭಣೆಯಿಂದ ಜರುಗಿತು.

ಅ.30 ಹಾಗು 31 ರಂದು ಹಲಸೂರು ಕೆರೆ ಸಮೀಪದ ಎಂ.ವಿ.ಗಾರ್ಡನ್ ನಲ್ಲಿ ನಡೆದ ಈ ಹಬ್ಬದಲ್ಲಿ ಕ್ಷೇತ್ರದ ಜನರಿಗಾಗಿ ವಿವಿಧ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳು ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಮೊದಲ ದಿನವಾದ ಶುಕ್ರವಾರ, ಶಾಲಾ ಮಕ್ಕಳಿಗಾಗಿ ಚಿತ್ರಕಲೆ ಹಾಗು ನೃತ್ಯ ಸ್ಪರ್ಧೆಗಳು ಜರುಗಿದವು. ಮಹಿಳೆಯರಿಗಾಗಿ ನಿಂಬೆ ಹಣ್ಣನ್ನು ಚಮಚದಲ್ಲಿ ಇಟ್ಟುಕೊಂಡು ಓಡುವ ಹಾಗೂ ಮ್ಯೂಸಿಕಲ್ ಚೇರ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಎರಡನೇ ದಿನವಾದ ಶನಿವಾರ ನಡೆದ ರಂಗೋಲಿ ಸ್ಪರ್ಧೆಯಲ್ಲಿ ನೂರಾರು ಮಹಿಳೆಯರು ಎಂ.ವಿ.ಗಾರ್ಡನ್ ನ ರಸ್ತೆಗಳಲ್ಲಿ ಬಣ್ಣ ಬಣ್ಣದ ಸುಂದರ ರಂಗೋಲಿ ಬಿಡಿಸುವ ಮೂಲಕ ಎಂ.ವಿ.ಗಾರ್ಡನಾದ್ಯಂತ ಹಬ್ಬದ ಕಳೆ ಸೃಷ್ಟಿಸಿದ್ದರು. ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪಾರಿತೋಷಕ ಹಾಗು ನಗದು ಬಹುಮಾನಗಳನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ, ಎಂ.ವಿ.ಗಾರ್ಡನ್ 7ನೇ ಮುಖ್ಯ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಲಾದ ಸುಸಜ್ಜಿತ ಇಂದಿರಾ ಗಾಂಧಿ ಕನ್ವೆನ್ಷನ್ ಸೆಂಟರ್ ಹಾಗು ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ರಿಝ್ವಾನ್ ಅರ್ಶದ್ ಅವರ ಜೊತೆಗೂಡಿ ಉದ್ಘಾಟಿಸಿದರು.

ನಂತರ ಸಚಿವದ್ವಯರು ಎಂ.ವಿ.ಗಾರ್ಡನ್ ನಲ್ಲಿ ನಿರ್ಮಿಸಲಾಗುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗು ಗ್ರಂಥಾಲಯದ ಕಟ್ಟಡಕ್ಕೆ ಗುದ್ದಲ್ಲಿ ಪೂಜೆ ನೆರವೇರಿಸಿದರು. ಬಳಿಕ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ರಿಝ್ವಾನ್ ಅರ್ಶದ್, ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಗೆ ತಾವು ಬದ್ಧರಾಗಿದ್ದು, ಇಲ್ಲಿನ ಜನರ ಬೇಡಿಕೆಯಂತೆ ಹೊಸ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಒಳಚರಂಡಿ ವ್ಯವಸ್ಥೆಯನ್ನು ನವೀಕರಣಗೊಳಿಸಲಾಗಿದೆ. ವಾರ್ಡ್ ನ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor