ಬೆಂಗಳೂರು : ಕೆಪಿಎಸ್ಸಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ವಶಕ್ಕೆ ಪಡೆದುಕೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅನ್ನು ಹೊರ ರಾಜ್ಯದಿಂದ ಮೊದಲು ಬೆಂಗಳೂರಿನ ದೇವನಹಳ್ಳಿಗೆ ಕರೆತಂದು ರೆಸಾರ್ಟ್‍ನಲ್ಲಿ ಮೂರು ದಿನ ಕೂರಿಸಿದ್ದರು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ರವಿವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಪಿಎಸ್ಸಿ ಅಕ್ರಮ ಸದ್ದು ಮಾಡಿದ ಬೆನ್ನಲ್ಲೇ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅನ್ನು ದಿಲ್ಲಿಗೆ ಕಳಿಸಿದ್ದು ಯಾರು?. ಅವರಿಗೆ ಅನುಮತಿ ನೀಡಿದ್ದು ಯಾರು?. ಅವರನ್ನು ದಿಲ್ಲಿಗೆ ಕಳುಹಿಸಿ ಆನಂತರ, ಇಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಕೈಗೊಂಡು ತನಿಖೆ ಆರಂಭಿಸಿದ ಬಳಿಕ ಅಧಿಕಾರಿಯನ್ನು ಹೊರ ರಾಜ್ಯದಿಂದ ದೇವನಹಳ್ಳಿಗೆ ಏಕಾಏಕಿ ಕರೆಸಿ ರೆಸಾರ್ಟ್‍ನಲ್ಲಿ ಮೂರು ದಿನ ಇರಿಸಿದ್ದು ಯಾರೆಂಬ ಮಾಹಿತಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಇಲ್ಲವೇ ಎಂದು ಪ್ರಶ್ನಿಸಿದರು.

ದಿನ ಬೆಳಗಾದರೆ ಆರೆಸ್ಸೆಸ್ ಬಗ್ಗೆ ಟೀಕೆ ಮಾಡುವ ಪ್ರಿಯಾಂಕ್ ಖರ್ಗೆ ಅವರಿಗೆ, ತನ್ನ ಇಲಾಖೆಯಲ್ಲಿ ಹೆಗ್ಗಣ ಸತ್ತು ಬಿದಿರುವುದು ಕಣ್ಣಿಗೆ ಕಾಣುತ್ತಿಲ್ಲ. ಯೋಗ್ಯತೆ ಇಲ್ಲದವರಿಂದ ಪರೀಕ್ಷೆ ಬಳಸಿ ಕೆಲಸ ಕೊಟ್ಟಿದ್ದಾರೆ. ನಿಮ್ಮ ಯೋಗ್ಯತೆಗೆ ಕೆಪಿಎಸ್ಸಿಯನ್ನು ಸ್ವಚ್ಛ ಮಾಡುವುದು ಸಾಧ್ಯವೇ?. ಹಿಂದೆ ಹೀಗೆಯೇ ಸ್ವಚ್ಛ ಮಾಡುತ್ತೇವೆ ಎಂದು ಹೊರಟು ಬಿಡಿಎ ಸಂಸ್ಥೆಯಲ್ಲಿ ಮಾಡಬಾರದನ್ನು ಮಾಡಿದ್ದ ವ್ಯಕ್ತಿಯನ್ನು ತಂದು ಕೆಪಿಎಸ್ಸಿ ಅಧ್ಯಕ್ಷನನ್ನಾಗಿ ಮಾಡಿದಿರಿ. ಆ ವ್ಯಕ್ತಿ ಕೋಟಿ ಕೋಟಿ ಲೆಕ್ಕದಲ್ಲಿ ಹುದ್ದೆಗಳನ್ನು ಹಾದಿಬೀದಿಯಲ್ಲಿ ಹರಾಜಿಗೆ ಇಟ್ಟರು. ಈಗ ನೋಡಿದರೆ 75,000 ಹುದ್ದೆಗಳನ್ನು ತುಂಬುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದಿರಿ. ಇದೇ ರೀತಿಯಲ್ಲಿ ಅಕ್ರಮವಾಗಿ ತುಂಬುತ್ತೀರಾ ಹೇಗೆ? ಎಲ್ಲಿದ್ದಾರೆ ನಿಮ್ಮ ರಾಹುಲ್ ಗಾಂಧಿ? ಕರೆದುಕೊಂಡು ಬನ್ನಿ ಒಮ್ಮೆ ಬೆಂಗಳೂರಿಗೆ. ಯುವಕರ ಜೊತೆ ಸಂವಾದ ನಡೆಸಲಿ. ಆಗ ನಿಮ್ಮ ಬಣ್ಣ ಬಯಲಾಗುತ್ತದೆ ಎಂದು ಅವರು ಹರಿಹಾಯ್ದರು.

ಜ್ಞಾನೇಂದ್ರ ಕುಮಾರ್‍ನನ್ನು ಈಗ ಬಂಧಿಸಿ ಒಂದೆರಡು ತಿಂಗಳು ನಾಟಕ ಮಾಡುತ್ತಾರೆ. ಸ್ವಲ್ಪ ದಿನ ಆದಮೇಲೆ ಇದಕ್ಕಿಂತ ಪೊಗದಸ್ತಾದ ಜಾಗವನ್ನು ಕೊಟ್ಟು ಇನ್ನೊಂದು ಅಕ್ರಮ ಮಾಡಲು ಹಾದಿ ಮಾಡಿಕೊಡುತ್ತಾರೆ.ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಕೆಪಿಎಸ್ಸಿಯನ್ನು ಸ್ವಚ್ಛ ಮಾಡುವ ಮನಸ್ಸು ಮತ್ತು ಇಚ್ಛಾಶಕ್ತಿ ಎರಡು ಇಲ್ಲ ಎಂದ ಅವರು, ಪಶುವೈದ್ಯಕೀಯ ಪರೀಕ್ಷೆಯಲ್ಲಿ ಶೇ.95ರಷ್ಟು ಅಂಕ ಬಂದವರಿಗೆ ಅವಕಾಶ ಸಿಕ್ಕಿಲ್ಲ. ಅವರು ಪಟ್ಟಿಯಲ್ಲಿ ಕೊನೆಯಲ್ಲಿದ್ದಾರೆ. ಆದರೆ ಎರಡೆರಡು ಬಾರಿ ಅನುತ್ತೀರ್ಣ ಆದವರಿಗೆ ಎರಡನೆ ರ್ಯಾಂಕ್ ಬಂದಿದೆ. ಇದು ಯಾವ ರೀತಿಯ ವ್ಯವಸ್ಥೆ ಎಂಬುದನ್ನು ಪ್ರಿಯಾಂಕ ಖರ್ಗೆ ಹೇಳಬೇಕಾಗಿದೆ ಎಂದು ಅವರು ಹೇಳಿದರು.

ಕೆಪಿಎಸ್‍ಸಿ ಬಗ್ಗೆ ಮಾತನಾಡುವುದಕ್ಕೆ ಅಸಹ್ಯವಾಗುತ್ತದೆ. ಅಲ್ಲಿ ಎಲ್ಲವೂ ಕೊಳೆತು ನಾರುತ್ತಿದೆ. ಇಂತಹ ಸಂಸ್ಥೆಯಿಂದ ರಾಜ್ಯಕ್ಕೆ ಒಳ್ಳೆಯದಾಗುವುದಿಲ್ಲ. ಹೈಕೋರ್ಟ್ ನಲ್ಲಿ ದಿನವೂ ಈ ಸಂಸ್ಥೆಯ ಅಕ್ರಮಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ. ನೀರಾವರಿ ಇಲಾಖೆ ನೇಮಕಾತಿ ಬಗ್ಗೆ ಹೈಕೋರ್ಟ್ ತಡೆಯಾಜ್ಞೆ ಕೊಟ್ಟಿದೆ. ರಾಜ್ಯದಲ್ಲಿ ನಿರುದ್ಯೋಗ ದಿನೇ ದಿನೇ ಹೆಚ್ಚಾಗುತ್ತಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಸರಕಾರ ಮತ್ತು ಕೆಪಿಎಸ್ಸಿ ಎರಡೂ ಕೂಡ ಅಕ್ರಮಗಳಲ್ಲಿ ಭಾಗಿಯಾಗಿವೆ. ಯುವಜನರ ಬದುಕಿನಲ್ಲಿ ಈ ಸಂಸ್ಥೆ ಚೆಲ್ಲಾಟವಾಡುತ್ತಿದೆ. ಪ್ರತಿ ಒಂದು ಹುದ್ದೆ ಲಕ್ಷಗಳಷ್ಟೇ ಅಲ್ಲದೆ ಕೋಟಿ ಲೆಕ್ಕದಲ್ಲಿ ಬೀದಿ ಬೀದಿಯಲ್ಲಿ ಬಿಕರಿಯಾಗುತ್ತಿದೆ. ಭ್ರಷ್ಟಾಚಾರವನ್ನು ಸೆದೆ ಬಡಿಯುವುದು ಎಂದರೆ ಹೀಗೇನಾ ಮುಖ್ಯಮಂತ್ರಿಗಳೇ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ಹಿರಿಯ ಮುಖಂಡ ತಿಮ್ಮೇಗೌಡ, ಪಕ್ಷದ ವಕ್ತಾರರಾದ ಶ್ವೇತಾ ಯಾದವ್, ನರಸಿಂಹಮೂರ್ತಿ ಸೇರಿದಂತೆ ಪ್ರಮುಖರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor