Bengaluru | ಆನ್ಲೈನ್ ಡೇಟಿಂಗ್ ಆಪ್: ಯುವಕನನ್ನು ಅಪಹರಿಸಿ 3.7 ಲಕ್ಷ ರೂ. ಸುಲಿಗೆ
ಸಾಂದರ್ಭಿಕ ಚಿತ್ರ | PC : Image by roserodionova on Magnific
ಬೆಂಗಳೂರು : ಡೇಟಿಂಗ್ ಅಪ್ಲಿಕೇಷನ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಯುವಕನನ್ನು ಅಪಹರಣ ಮಾಡಿ, ಆತನಿಂದ 3.7 ಲಕ್ಷ ರೂಪಾಯಿ ಸುಲಿಗೆ ಮಾಡಿರುವ ಘಟನೆ ನಗರದಲ್ಲಿ ನಡೆದಿದ್ದು, ಈ ಕುರಿತು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಚಂದಾಪುರ ನಿವಾಸಿ ಜೇಕಬ್(33) ಎಂಬ ಯುವಕ ಹಣ ಕಳೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಯುವಕ ಕೆಲವು ತಿಂಗಳುಗಳಿಂದ ಡೇಟಿಂಗ್ ಅಪ್ಲಿಕೇಷನ್ ಬಳಸುತ್ತಿದ್ದನು. ಇತ್ತೀಚೆಗೆ ಆತನಿಗೆ ಪೂನಂ ಎಂಬ ಹೆಸರಿನ ಯುವತಿಯ ಪರಿಚಯವಾಗಿದ್ದಾಳೆ. ಆಕೆ ಎಲೆಕ್ಟ್ರಾನಿಕ್ ಸಿಟಿಯ ನಿವಾಸಿ ಎಂದು ಪರಿಚಯಿಸಿಕೊಂಡು, ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡಿದ್ದಳು ಎನ್ನಲಾಗಿದೆ.
ರಾತ್ರಿ ಎಲೆಕ್ಟ್ರಾನಿಕ್ಸ್ ಸಿಟಿಯ ಪಬ್ ಒಂದರ ಬಳಿ ಸಿಗುವಂತೆ ಪೂನಂ ಜೇಕಬ್‍ನನ್ನು ಆಹ್ವಾನಿಸಿದ್ದಾಳೆ. ಅದರಂತೆ ರಾತ್ರಿ 9.45ರ ಸುಮಾರಿಗೆ ಜೇಕಬ್ ಸ್ಥಳಕ್ಕೆ ತಲುಪಿದ್ದಾಗ, ಯುವತಿಯು ಬಿಳಿ ಬಣ್ಣದ ಕಾರಿನಲ್ಲಿ ಬಂದು, ಕಾರಿಗೆ ಇಂಧನ ತುಂಬಿಸಿಕೊಂಡು ಬರೋಣ ಎಂದು ಹೇಳಿ ಜೇಕಬ್‍ನನ್ನು ಕಾರಿಗೆ ಹತ್ತಿಸಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಪ್ರಯಾಣದ ಮಧ್ಯೆ, ಶೌಚಾಲಯಕ್ಕೆ ಹೋಗಬೇಕೆಂದು ನೆಪ ಹೇಳಿ ಯುವತಿಯು ಕಾರನ್ನು ಕತ್ತಲಾದ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದಾಳೆ. ಈ ವೇಳೆ ಇದ್ದಕ್ಕಿದ್ದಂತೆ ಬಂದ ನಾಲ್ವರು ಅಪರಿಚಿತ ವ್ಯಕ್ತಿಗಳು ಜೇಕಬ್‍ನನ್ನು ಬೆದರಿಸಿ ಅದೇ ಕಾರಿನಲ್ಲಿ ಬಲವಂತವಾಗಿ ಕರೆದೊಯ್ದಿದ್ದಾರೆ. ನಂತರ ಆತನನ್ನು ಮತ್ತೊಂದು ಬೂದು ಬಣ್ಣದ ಕಾರಿಗೆ ಸ್ಥಳಾಂತರಿಸಿ, ನಗರದ ವಿವಿಧೆಡೆ ಸುತ್ತಾಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಕೊಲೆ ಬೆದರಿಕೆ ಹಾಕಿ, 7 ಸಾವಿರ ರೂ. ನಗದು ಸಹಿತ ಪರ್ಸ್, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‍ಗಳನ್ನು ಕಸಿದುಕೊಂಡಿದ್ದಾರೆ. ಎಟಿಎಂ ಕೇಂದ್ರಕ್ಕೆ ಕರೆದೊಯ್ದು 45 ಸಾವಿರ ರೂ. ನಗದು ಪಡೆದಿದ್ದಾರೆ. ಕ್ರೆಡಿಟ್ ಕಾರ್ಡ್ ಪಾಸ್‍ವರ್ಡ್ ಬದಲಿಸಿ, 3.2 ಲಕ್ಷ ರೂಪಾಯಿಯನ್ನು ಬೇರೊಂದು ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಹಣ ಕಳೆದುಕೊಂಡ ಸಂತ್ರಸ್ತ ಜೇಕಬ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ದೂರಿನ ಆಧಾರದ ಮೇಲೆ ಅಪಹರಣ ಮತ್ತು ಸುಲಿಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯುವತಿಯ ಮೊಬೈಲ್ ಸಂಖ್ಯೆ, ಎಟಿಎಂ ಹಾಗೂ ಪೆಟ್ರೋಲ್ ಬಂಕ್‍ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.