×
Ad

'ಹೇಳಿ ಹೋಗು ಕಾರಣ' ಪುಸ್ತಕ ನಕಲಿ ಪ್ರತಿಗಳ ಮಾರಾಟ ಆರೋಪ; ಪ್ರಕರಣ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಅಮೆಜಾನ್

Update: 2026-05-13 00:22 IST

ಬೆಂಗಳೂರು: ಪತ್ರಕರ್ತ ದಿ. ರವಿ ಬೆಳೆಗೆರೆ ರಚನೆಯ 'ಹೇಳಿ ಹೋಗು ಕಾರಣ' ಕಾದಂಬರಿಯನ್ನು ನಕಲು ಮಾಡಿ ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಅಮೆಜಾನ್‌ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದೆ.

ನಗರದ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಅಮೆಜಾನ್ ಸೆಲ್ಲರ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯು ನ್ಯಾಯಮೂರ್ತಿ ಎಂ.ಜಿ.ಎಸ್‌. ಕಮಾಲ್‌ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ನಿಗದಿಯಾಗಿತ್ತು.

ಅರ್ಜಿ ಸಂಬಂಧ ಕಚೇರಿ ಎತ್ತಿರುವ ಆಕ್ಷೇಪಣೆಗಳನ್ನು ಸರಿಪಡಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಒಂದು ವಾರ ಮುಂದೂಡಿತು.

ಅಮೆಜಾನ್ ಮನವಿ ಏನು?

ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಅವರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ 2026 ಫೆಬ್ರವರಿ 4ರಂದು ದಾಖಲಿಸಿರುವ ದೂರು ಹಾಗೂ ಆ ದೂರನ್ನು ಆಧರಿಸಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಅಮೆಜಾನ್ ಸಂಸ್ಥೆ ಅರ್ಜಿಯಲ್ಲಿ ಮನವಿ ಮಾಡಿದೆ.

ಜತೆಗೆ, ಅರ್ಜಿ ಇತ್ಯರ್ಥವಾಗುವವರೆಗೆ ಪ್ರಕರಣದ ತನಿಖೆಗೆ ತಡೆ ನೀಡಬೇಕು. ಅರ್ಜಿದಾರ ಕಂಪನಿ, ಅದರ ‌ಅಧಿಕಾರಿಗಳು, ನಿರ್ದೇಶಕರು ಹಾಗೂ ಸಿಬ್ಬಂದಿಯ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಪೊಲೀಸರಿಗೆ ನಿರ್ದೇಶಿಸಬೇಕು ಹಾಗೂ ಪ್ರಕರಣದ ಸಂಬಂಧ ಹಾಜರಾಗುವಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 35(3) ರ ಅಡಿಯಲ್ಲಿ 2026ರ ಮೇ 5ರಂದು ಪೊಲೀಸರು ನೀಡಿರುವ ನೋಟಿಸ್‌ಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮಧ್ಯಂತರ ಮನವಿ ಮಾಡಲಾಗಿದೆ

ಪ್ರಕರಣವೇನು?

ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ 2026ರ ಫೆಬ್ರವರಿ 4ರಂದು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿ, ಭಾವನಾ ಪ್ರಕಾಶನದ ಮೂಲಕ ಪ್ರಕಟಿಸಲಾದ ನನ್ನ ತಂದೆ ರವಿ ಬೆಳಗೆರೆ ರಚನೆಯ 'ಹೇಳಿ ಹೋಗು ಕಾರಣ' ಪುಸ್ತಕವು 2003ರ ಸೆಪ್ಟೆಂಬರ್‌ನಲ್ಲಿ ಮೊದಲ ಪ್ರಕಟಣೆ ಕಂಡಿತ್ತು. ಈ ಕೃತಿಯ 31ನೇ ಮುದ್ರಣ ಏಪ್ರಿಲ್‌ 2005ರಲ್ಲಿ ಆಗಿದೆ. ಪುಸ್ತಕದ ಸಂಪೂರ್ಣ ಹಕ್ಕು ಸ್ವಾಮ್ಯ ನಮ್ಮದೇ 'ಭಾವನಾ ಪ್ರಕಾಶನ'ಕ್ಕೆ ಸೇರಿದೆ. ಮುದ್ರಣ ಮಾರಾಟ ಮತ್ತು ವಿತರಣೆ ಮಾಡುವ ಏಕೈಕ ಕಾನೂನು ಬದ್ಧ ಹಕ್ಕು ಪ್ರಕಾಶನಕ್ಕೆ ಸೇರಿದೆ. ಆದರೆ, ಇತ್ತೀಚೆಗೆ ಕೆಲವರು ಮತ್ತು ಅಮೆಜಾನ್‌, ಫ್ಲಿಪ್‌ಕಾರ್ಟ್‌, ಮೀಶೊ ಎಂಬ ಕಂಪನಿಗಳು ಪುಸ್ತಕವನ್ನು ನಕಲು ಮಾಡಿ, ನಮ್ಮಿಂದ ಯಾವುದೇ ಅನುಮತಿ ಪಡೆಯದೇ ತಮ್ಮ ಆ್ಯಪ್‌ಗಳ ಮೂಲಕ ಅಕ್ರಮವಾಗಿ ರಿಯಾಯಿತಿ ನೆಪದಲ್ಲಿ ಮೂಲ ಬೆಲೆಗಿಂತ (ಪ್ರಸ್ತುತ 350 ರೂ.) ಕಡಿಮೆ ದರದಲ್ಲಿ 149 ರೂ.ಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಆರೋಪಿಸಿದ್ದರು.

ಪುಸ್ತಕದ ಅಕ್ರಮ ಮಾರಾಟದಿಂದ ಭಾವನಾ ಪ್ರಕಾಶನಕ್ಕೆ ಆರ್ಥಿಕ ನಷ್ಟ ಉಂಟಾಗಿದ್ದು, ಲೇಖಕರ ಹಕ್ಕುಗಳಿಗೆ ಧಕ್ಕೆಯಾಗಿದೆ. ಇದು ಕಾಪಿರೈಟ್‌ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಉಲ್ಲಂಘನೆಯೂ ಆಗಿದೆ ಎಂದು ದೂರಿನಲ್ಲಿ ಆಕ್ಷೇಪಿಸಿದ್ದರು. ಈ ದೂರನ್ನು ಆಧರಿಸಿ ಪೊಲೀಸರು ಅಮೆಜಾನ್‌, ಫ್ಲಿಪ್‌ಕಾರ್ಟ್‌ ಹಾಗೂ ಮೀಶೊ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದೀಗ, ಈ ಪ್ರಕರಣ ರದ್ದುಕೋರಿ ಅಮೆಜಾನ್ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News