ರಾಜೀನಾಮೆ ಸಲ್ಲಿಸಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕಾರ: ಸಿಎಂ ಡಿ.ಕೆ.ಶಿವಕುಮಾರ್
''ನಿಗಮ ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಅವಕಾಶ''
ಡಿ.ಕೆ.ಶಿವಕುಮಾರ್
ಬೆಂಗಳೂರು: ''ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ'' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಶಾಸಕರ ರಾಜೀನಾಮೆ ಕುರಿತು ನಡೆಯುತ್ತಿರುವ ಚರ್ಚೆಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ''ರಾಜೀನಾಮೆ ಕೊಡುವವರನ್ನು ಯಾರಿಗೂ ತಡೆಯಲು ಆಗುವುದಿಲ್ಲ. ಪಕ್ಷ ಬೇಕು ಮತ್ತು ಅವರಿಗೂ ಭವಿಷ್ಯ ಬೇಕು ಅನ್ನುವುದಾದರೆ ಇರುತ್ತಾರೆ'' ಎಂದರು.
''ಧರಂ ಸಿಂಗ್, ಸಿದ್ದರಾಮಯ್ಯ ಕಾಲದಲ್ಲಿ ನನಗೂ ಸಚಿವ ಸ್ಥಾನ ತಪ್ಪಿತ್ತು. ನಾನೂ ಆಗ ರಾಜೀನಾಮೆ ಕೊಡಬಹುದಿತ್ತಲ್ವ? ನಾನು, ಡಾ.ಜಿ.ಪರಮೇಶ್ವರ್ ತಾಳ್ಮೆಯಿಂದ ಇರ್ಲಿಲ್ವ?. ವೀರೇಂದ್ರ ಪಾಟೀಲ್ ಕಾಲದಲ್ಲಿ ಬಂಗಾರಪ್ಪ, ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್ ಅವರಿಗೂ ಸಚಿವ ಸ್ಥಾನ ಕೊಟ್ಟಿರಲಿಲ್ಲ. ಅವರೆಲ್ಲಾ ಮುಖ್ಯಮಂತ್ರಿಯಾಗಿದ್ದಾರೆ. ಕೆಲವು ಸಂದರ್ಭಗಳಲ್ಲಿ ತಾಳ್ಮೆಯಿಂದಿರಬೇಕು. ಎಲ್ಲಕ್ಕಿಂತ ಪಕ್ಷವೇ ಮುಖ್ಯ'' ಎಂದು ಮುಖ್ಯಮಂತ್ರಿ ಹೇಳಿದರು.
''ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ'' ಎಂದು ಮುಖ್ಯಮಂತ್ರಿ ಹೇಳಿದರು.
ನಿಗಮ ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಅವಕಾಶ
ಎಲ್ಲಾ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಸೇರಿದಂತೆ ಇತರೇ ಹುದ್ದೆಗಳಿಗೆ ರಾಜಿನಾಮೆ ನೀಡಿ ಎಂದು ಸೂಚಿಸುತ್ತೇನೆ. ಎಲ್ಲರಿಗೂ ಮುಂಚಿತವಾಗಿ ಎರಡೂವರೆ ವರ್ಷ ಎಂದು ಸೂಚನೆ ನೀಡಿದ್ದೆವು. ಶಾಸಕರು, ಸಚಿವರಿಗೂ ಇದನ್ನು ತಿಳಿಸಿದ್ದೆವು. ಮೊದಲು ಕಾರ್ಯಕರ್ತರಿಗೆ ಅಧಿಕಾರ ನೀಡಲಾಗುವುದು. ನಂತರ ಶಾಸಕರನ್ನು ಕರೆದು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
''ನಾಳೆಯಿಂದ ಎಲ್ಲ ಸಚಿವರು ಜಿಲ್ಲೆಗಳಿಗೆ ತೆರಳಿ ಅತಿವೃಷ್ಟಿ/ಅನಾವೃಷ್ಟಿ ಬಗ್ಗೆ ಪರಿವೀಕ್ಷಣೆಗೆ ನಡೆಸುವಂತೆ ಹೇಳಿದ್ದೇನೆ. ಎಲ್ಲಾ ಜಿಲ್ಲೆಗಳಲ್ಲಿ ಸರಕಾರಿ ಕಚೇರಿಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದ್ದೇನೆ'' ಎಂದರು.