Bengaluru | ಹಿಂದುತ್ವ ಸಂಘಟನೆಗಳ ವಿರೋಧದ ನಡುವೆ ಕಾಮಿಡಿಯನ್ ಕುನಾಲ್ ಕಾಮ್ರಾ ಕಾರ್ಯಕ್ರಮ ಕೋರಮಂಗಲಕ್ಕೆ ಸ್ಥಳಾಂತರ
Photo Credit: X/@kunalkamra
ಬೆಂಗಳೂರು : ಹಿಂದುತ್ವ ಸಂಘಟನೆಗಳ ವಿರೋಧದ ಹಿನ್ನೆಲೆಯಲ್ಲಿ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಅವರು ವೈಟ್‌ಫೀಲ್ಡ್‌ನಲ್ಲಿ ಸೋಮವಾರದಿಂದ ಗುರುವಾರದವರೆಗೆ ನಿಗದಿಯಾಗಿದ್ದ ತಮ್ಮ ಕಾರ್ಯಕ್ರಮಗಳನ್ನು ಕೋರಮಂಗಲದ ಅಂಡರ್‌ಗ್ರೌಂಡ್ ಕಾಮಿಡಿ ಕ್ಲಬ್‌ಗೆ ಸ್ಥಳಾಂತರಿಸಿದ್ದಾರೆ.
ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು, ಕಾಮ್ರಾ ಅವರು ಹಿಂದೂ ದೇವತೆಗಳನ್ನು ಅಗೌರವಿಸಿದ್ದಾರೆ ಎಂದು ಆರೋಪಿಸಿ, ಅವರಿಗೆ ವೈಟ್‌ಫೀಲ್ಡ್‌ನಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಬಾರದು ಎಂದು ವೈಟ್‌ಫೀಲ್ಡ್ ಪೊಲೀಸರಿಗೆ ಮನವಿ ಸಲ್ಲಿಸಿತ್ತು. ಈ ಬೆಳವಣಿಗೆಯ ನಂತರ ಕಾರ್ಯಕ್ರಮದ ಸ್ಥಳ ಬದಲಾಯಿಸಲಾಗಿದೆ.
ವೈಟ್‌ಫೀಲ್ಡ್ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು The Hindu ಗೆ ನೀಡಿದ ಮಾಹಿತಿಯಂತೆ, ಕಾಮ್ರಾ ಹಾಗೂ ಕಾರ್ಯಕ್ರಮದ ಆಯೋಜಕರು ರವಿವಾರ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಕಾರ್ಯಕ್ರಮವು ವಿವಾದಕ್ಕೆ ಕಾರಣವಾಗಿದ್ದರಿಂದ ವೈಟ್‌ಫೀಲ್ಡ್ ನಲ್ಲಿನ ಪ್ರದರ್ಶನಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಅವರು ಕೈಗೊಂಡರು. ಈ ಸಂಬಂಧ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಮ್ರಾ ಅವರು ರವಿವಾರ ಸಾಮಾಜಿಕ ಜಾಲತಾಣ Xನಲ್ಲಿ, "ಸೋಮವಾರದಿಂದ ಗುರುವಾರದವರೆಗೆ ನಡೆಯಲಿದ್ದ ಎಲ್ಲ ಕಾರ್ಯಕ್ರಮಗಳನ್ನು ಕೋರಮಂಗಲದ ಅಂಡರ್‌ಗ್ರೌಂಡ್ ಕಾಮಿಡಿ ಕ್ಲಬ್‌ಗೆ ಸ್ಥಳಾಂತರಿಸಲಾಗಿದೆ" ಎಂದು ಪ್ರಕಟಿಸಿದ್ದಾರೆ.
ವೈಟ್‌ಫೀಲ್ಡ್ ಕಾರ್ಯಕ್ರಮಗಳಿಗೆ ಈಗಾಗಲೇ ಟಿಕೆಟ್ ಖರೀದಿಸಿರುವವರಿಗೆ ಹಣವನ್ನು ಮರುಪಾವತಿಸಲಾಗುವುದು. ಕೋರಮಂಗಲದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಹೊಸದಾಗಿ ಟಿಕೆಟ್ ಕಾಯ್ದಿರಿಸುವಂತೆ ಅವರು ಮನವಿ ಮಾಡಿದ್ದಾರೆ.
ವೈಟ್‌ಫೀಲ್ಡ್‌ನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಹಿಂದುತ್ವ ಕಾರ್ಯಕರ್ತರಿಗೆ ಕಾಮ್ರಾ ಈ ಹಿಂದೆ ಪ್ರತಿಕ್ರಿಯಿಸಿದ್ದರು. ರವಿವಾರ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ಬಂದು ಅನುಮತಿ ಪಡೆಯುವುದಾಗಿ ಹಾಗೂ "ಹಾಸ್ಯ ಮತ್ತು ಸಂಸ್ಕೃತಿ" ಕುರಿತು ಚರ್ಚಿಸಲು ಆಕ್ಷೇಪ ವ್ಯಕ್ತಪಡಿಸುವವರನ್ನೂ ಆಹ್ವಾನಿಸಿದ್ದರು.
ಇನ್ನೊಂದೆಡೆ, ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಮೋಹನ್ ಗೌಡ, ಕಾಮ್ರಾ ಕಾರ್ಯಕ್ರಮಗಳನ್ನು ಕೋರಮಂಗಲಕ್ಕೆ ಸ್ಥಳಾಂತರಿಸಿದ ಬಳಿಕ, ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಅವರಿಗೆ ಪ್ರದರ್ಶನ ನಡೆಸಲು ಅವಕಾಶ ನೀಡಬಾರದು ಎಂದು ಕೋರಮಂಗಲ ಪೊಲೀಸರಿಗೆ ಮನವಿ ಸಲ್ಲಿಸಿರುವುದಾಗಿ ಹೇಳಿದ್ದಾರೆ.
Shows for Monday - Tuesday -Wednesday - Thursday shifted to Underground Comedy Club in Kormangla -
— Kunal Kamra (@kunalkamra88) August 2, 2026
(Book my show will process the refund for tickets purchased for the Whitefield show/ You can buy a fresh ticket on the below link for the show) https://t.co/PMrfpEKi4j
*Limited…