ರಾಜ್ಯದಲ್ಲಿ ಅಕ್ರಮ ಪಡಿತರ ಅಕ್ಕಿ ಕಳ್ಳಸಾಗಣೆ : 4.75 ಕೋಟಿ ರೂ. ಮೌಲ್ಯದ ಅಕ್ಕಿ, ಲಾರಿಗಳ ಜಪ್ತಿ
9 ಆರೋಪಿಗಳ ವಿರುದ್ಧ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜ್ಯದಲ್ಲಿ ಬಡವರಿಗಾಗಿ ವಿತರಿಸಲಾಗುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡುವವರ ವಿರುದ್ಧ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಒಟ್ಟು 4.75 ಕೋಟಿ ರೂ. ಮೌಲ್ಯದ 565 ಮೆಟ್ರಿಕ್ ಟನ್ ಅಕ್ರಮ ಪಡಿತರ ಅಕ್ಕಿ ಹಾಗೂ ಕಳ್ಳಸಾಗಣೆಗೆ ಬಳಸುತ್ತಿದ್ದ 24 ಲಾರಿಗಳನ್ನು ಜಪ್ತಿ ಮಾಡಿದ್ದಾರೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಝ್ವಾನ್ ಅರ್ಷದ್ ಅವರ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ಕಳೆದ ಮೂರು ದಿನಗಳಿಂದ ಅಧಿಕಾರಿಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದಾಳಿ ನಡೆಸಿ, ಅಗತ್ಯ ವಸ್ತುಗಳ ಕಾಯ್ದೆಯಡಿ 5,64,992 ಕೆ.ಜಿ. ಅಕ್ರಮ ಪಡಿತರ ಅಕ್ಕಿ ಜಪ್ತಿ ಮಾಡಿದ್ದಾರೆ. ಒಟ್ಟು 9 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಬಣ್ಣದ ಪ್ಯಾಕೆಟ್‍ಗಳಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ 71,800 ಕೆ.ಜಿ. ಅಕ್ಕಿ ಮತ್ತು 3 ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಚಾಲಕರಾದ ರತನ್ ಬಬನ್ ಸದಾನಂದೆ, ವಿಜಯನಾರಾಯಣ್ ಭೋಸ್ಥೆ ಹಾಗೂ ಮಹಮ್ಮದ್ ರಫೀಕ್ ಅತ್ತಾರ್ ವಿರುದ್ಧ ನಿಪ್ಪಾಣಿ ಗ್ರಾಮೀಣ ಮತ್ತು ಮಾಳಮಾರುತಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿಜಯಪುರದ ಜಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ 35,392 ಕೆ.ಜಿ. ಅಕ್ಕಿ ಹಾಗೂ ಲಾರಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರಿನ ಅತ್ತಿಬೆಲೆ ಚೆಕ್ ಪೋಸ್ಟ್ ನಲ್ಲಿ ತಮಿಳುನಾಡಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 35,000 ಕೆ.ಜಿ. ಪಡಿತರ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಮಂಡ್ಯದ ಶ್ರೀ ಅನ್ನಪೂರ್ಣೇಶ್ವರಿ ಎಂಟರ್‍ಪ್ರೈಸಸ್ ಮಾಲಕರು, ಮಧ್ಯಪ್ರದೇಶದ ಸೇಲರ್ ಎಕ್ಸ್ ಪೋಟ್ರ್ಸ್ ಲಿಮಿಟೆಡ್ ಮಾಲಕರು ಹಾಗೂ ಲಾರಿ ಚಾಲಕರು ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಳಗಾವಿಯ ಕಾಗವಾಡದ ಲೋಕೂರು ಗ್ರಾಮದ ಶ್ರೀ ಬನಶಂಕರಿ ಆಗ್ರೋ ಪ್ರೊಸೆಸಿಂಗ್ ಅಕ್ಕಿ ಗಿರಣಿ ಮೇಲೆ ಕೃಷಿ ಮಾರಾಟ ಮತ್ತು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ದಾಳಿ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಿದ್ದ 4,22,800 ಕೆ.ಜಿ. ಪಡಿತರ ಅಕ್ಕಿ ಹಾಗೂ 19 ಲಾರಿಗಳನ್ನು ವಶಕ್ಕೆ ಪಡೆದು, ಗೋದಾಮನ್ನು ಮುಟ್ಟುಗೋಲು ಮಾಡಲಾಗಿದೆ.
ಕರ್ತವ್ಯಲೋಪ :ಇಬ್ಬರು ಅಧಿಕಾರಿಗಳ ಅಮಾನತು
ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದ ರವಿ ಟ್ರೇಡರ್ಸ್‍ಗೆ ಸೇರಿದ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಮತ್ತು ಲಾರಿಯನ್ನು ಯಾವುದೇ ಕ್ರಮ ಜರುಗಿಸದೆ ಬಿಡುಗಡೆ ಮಾಡಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಹುಕ್ಕೇರಿ ತಾಲೂಕಿನ ಆಹಾರ ಇಲಾಖೆ ನಿರೀಕ್ಷಕ ಪ್ರವೀಣ ಸಾಗರ ಹಾಗೂ ಶಿರಸ್ತೆದಾರ ಎಲ್.ಬಿ. ಢಾಂಗೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆಹಾರ ಇಲಾಖೆ ಆಯುಕ್ತೆ ಬಿ. ಪೂರ್ಣಿಮಾ ಆದೇಶ ಹೊರಡಿಸಿದ್ದಾರೆ.
ಬಡವರ ಅಕ್ಕಿಯನ್ನು ಕಳ್ಳಸಾಗಣೆ ಮಾಡಿ ಲಾಭ ಮಾಡಿಕೊಳ್ಳುವುದು ಅತ್ಯಂತ ಹೀನ ಕೃತ್ಯವಾಗಿದ್ದು, ಅಕ್ರಮದಲ್ಲಿ ತೊಡಗುವವರ ಹಾಗೂ ಅವರಿಗೆ ಸಹಕರಿಸುವ ಅಧಿಕಾರಿಗಳ ವಿರುದ್ಧ ದಾಕ್ಷಿಣ್ಯವಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
-ರಿಝ್ವಾನ್ ಅರ್ಷದ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ