ಬೆಂಗಳೂರು : ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿನ (ಆರ್‌ಜಿಯು‌ಎಚ್‌ಎಸ್) ಪದನ್ನೋತಿ, ನಿಯೋಜನೆ, ವರ್ಗಾವಣೆ ಹಾಗೂ ಗುತ್ತಿಗೆ ನೇಮಕಾತಿಗಳಿಗೆ ತಕ್ಷಣ ನೇಮಕಾತಿ ಮಂಡಳಿ ರಚಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಆರೋಗ್ಯ ವಿವಿಯ ಆಡಳಿತ ವಿಭಾಗದಲ್ಲಿ ಶಾಖಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ನೌಕರರು ಸದಸ್ಯರಾಗಿರುವ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನೌಕರರ ಸಂಘ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಆರ್‌ಜಿಯುಎಚ್‌ಎಸ್‌ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಅ.16ಕ್ಕೆ ಮುಂದೂಡಿತು.

ಮನವಿ ಏನು? :

ರಾಜೀವಗಾಂಧಿ ಆರೋಗ್ಯ ವಿವಿ ಕಾಯ್ದೆ1994ರ ಸೆಕ್ಷನ್ 51ರ ಪ್ರಕಾರ ನೇಮಕಾತಿ ಮಂಡಳಿ ರಚನೆ ಕಡ್ಡಾಯ. ಈ ಹಿಂದೆ ರಚಿಸಲಾಗಿದ್ದ ನೇಮಕಾತಿ ಮಂಡಳಿಯ ಅವಧಿ 2025ರ ಮೇ 23ಕ್ಕೆ ಕೊನೆಗೊಂಡಿದೆ. ನೇಮಕಾತಿ ಮಂಡಳಿ ಇಲ್ಲದೇ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸುವಂತಿಲ್ಲ. ಆದರೂ, ವಿವಿ ನೇಮಕಾತಿಗಳನ್ನು ನಡೆಸುತ್ತಿದೆ. ಮಂಡಳಿಯ ಅನುಪಸ್ಥಿತಿಯಲ್ಲಿ ನೇಮಕಾತಿಗಳು ನಡೆಯುವುದರಿಂದ ಬಡ್ತಿಗೆ ಅರ್ಹರಾದವರಿಗೆ ಅನ್ಯಾಯವಾಗಲಿದೆ. ಆದ್ದರಿಂದ, ತಕ್ಷಣ ನೇಮಕಾತಿ ಮಂಡಳಿ ರಚಿಸುವಂತೆ ಸರ್ಕಾರ, ವಿವಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor